ಸಿಬಿಎಸ್‍ಇ 10ನೇ ತರಗತಿಯ ಫಲಿತಾಂಶ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.3- ಸಿಬಿಎಸ್‍ಇ 10 ನೇ ತರಗತಿಯ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, 12 ಗಂಟೆ ಬಳಿಕ ಬೋರ್ಡ್‍ನ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. 2021ನೇ ಸಾಲಿನಲ್ಲಿ ಸಿಬಿಎಸ್‍ಇ 10 ನೇ ತರಗತಿಗೆ ನೋಂದಾವಣೆಯಾಗಿದ್ದ ವಿದ್ಯಾರ್ಥಿಗಳ ಮೌಲ್ಯಾಂಕನ ನಡೆದಿದ್ದು, ಹಿಂದಿನ ಪರೀಕ್ಷೆಗಳಲ್ಲಿ ಪಡೆದ ಅಂಕ ಮತ್ತು ಶೈಕ್ಷಣಿಕ ಚಟುವಟಿಕೆ ಆಧರಿಸಿ ಅಂಕ ನೀಡಲಾಗಿದೆ.

ಸಿಬಿಎಸ್‍ಇ ಬೋರ್ಡ್ ಮೇ 4ರಿಂದ ಜುಲೈ 14ರವರೆಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಘೋಷಿಸಲಾಗಿತ್ತು. ಆದರೆ ಆ ವೇಳೆಗೆ ಕೊರೊನಾ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚಾಗಿತ್ತು. ಬಹಳಷ್ಟು ರಾಜ್ಯಗಳಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದರು.

ಅದನ್ನು ಆಧರಿಸಿ ಬಹಳಷ್ಟು ರಾಜ್ಯಗಳು ಸ್ಥಳೀಯವಾಗಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿದ್ದವು. ಆದರೆ ಕರ್ನಾಟಕದಲ್ಲಿ ಮಾತ್ರ ಎಸ್‍ಎಸ್‍ಎಲ್‍ಸಿಗೆ ಎರಡು ದಿನಗಳ ಪರೀಕ್ಷೆ ನಡೆಸಲಾಗಿದೆ. ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಸಿಬಿಎಸ್‍ಇ ಬೋರ್ಡ್ ವ್ಯಾಪ್ತಿಗೆ ಒಳಪಡುವ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಮಾಡಿದ್ದು, ಇಂದು ಫಲಿತಾಂಶ ಪ್ರಕಟಿಸಲಾಗಿದೆ. ಕಳೆದ ವರ್ಷ ಕೂಡ ಪರೀಕ್ಷೆ ಇಲ್ಲದೆ ಫಲಿತಾಂಶ ಪ್ರಕಟಿಸಲಾಗಿತ್ತು.

ವಿದ್ಯಾರ್ಥಿಗಳು ಮತ್ತು ಪೋಷಕರು https://cbseresults.nic.in/ ವೆಬ್‍ಸೈಟ್‍ನಲ್ಲಿ ಫಲಿತಾಂಶವನ್ನು ವಿಕ್ಷೀಸಬಹುದಾಗಿದೆ.

Facebook Comments