ಸರ್ಕಾರಿ ಕಚೇರಿಗಳಿಗೆ ಥರ್ಮಲ್ ಸಿಸಿ ಕ್ಯಾಮಾರ ಅಳವಡಿಕೆಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21- ಸರ್ಕಾರಿ ಕಚೇರಿಗಳಲ್ಲಿ , ಜನಸಂದಣೀಯ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಟೆಸ್ಟ್ ಸಿಸಿ ಕ್ಯಾಮಾರ ಅಳವಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಆತಂಕ ದುಪ್ಪಟ್ಟಾಗಿದೆ. ಖಾಸಗಿ ಸಂಸ್ಥೆಗಳು ಬಹುತೇಕ ಮನೆಗೆಲಸದ ಪದ್ಧತಿಯನ್ನು ಅಳವಡಿಸಿಕೊಂಡಿವೆ. ವಾಣಿಜ್ಯ ಸಂಕೀರ್ಣಗಳು, ಮಾಲ್‍ಗಳು, ಚಿತ್ರಮಂದಿರಗಳು, ಪ್ರಮುಖ ಮಾರುಕಟ್ಟೆಗಳು ಮುಚ್ಚಿವೆ.

ಆದರೆ ಸರ್ಕಾರ ಇನ್ನೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡಿಲ್ಲ. ಎಲ್ಲಾ ಸರ್ಕಾರಿ ಕಚೇರಿಗಳು ಚಾಲ್ತಿಯಲ್ಲಿವೆ. ಸರಿ ಸುಮಾರು ಏಳು ಲಕ್ಷಕ್ಕೂ ಹೆಚ್ಚಿನ ಸರ್ಕಾರಿ ನೌಕಕರು ದಿನ ನಿತ್ಯ ಮನೆಯಿಂದ ಕಚೇರಿಗೆ ಓಡಾಡುತ್ತಿದ್ದಾರೆ. ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಚೇರಿಗಳಲ್ಲಿ ಬಯೋ ಮೆಟ್ರಿಕ್ ಹಾಜರಾತಿ ಹಾಕುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಉಳಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಆದರೂ ಸರ್ಕಾರಿ ನೌಕರರಲ್ಲಿ ಅವ್ಯಕ್ತವಾದ ಭಯ ಮನೆ ಮಾಡಿದೆ. ಸಾರ್ವಜನಿಕರೂ ಕೂಡ ಸರ್ಕಾರಿ ಕಚೇರಿಗಳಿಗೆ ಪ್ರತಿನಿತ್ಯ ಬರುತ್ತಲೆ ಇದ್ದಾರೆ. ಯಾರಿಗೆ ಜ್ವರ ಇದೆ, ಯಾರಿಗೆ ಸೋಂಕಿದೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಹೈಕೋರ್ಟ್ ಹೊರತು ಪಡಿಸಿ ಉಳಿದ ಯಾವ ಕಚೇರಿಗಳಲ್ಲೂ ವೈಜ್ಞಾನಿಕ ತಪಾಸಣೆ ನಡೆಯುತ್ತಿಲ್ಲ.

ಇಂದು ಬೆಳಗ್ಗೆ ಟ್ವಿಟ್ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಟೆಸ್ಟ್ ಸಿಸಿ ಕ್ಯಾಮಾರಗಳನ್ನು ಅಳವಡಿಸಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.

ಈ ವ್ಯವಸ್ಥೆ ಜಾರಿಯಾದರೆ ಕನಿಷ್ಠ ಬಾಗಿಲ ಬಳಿಯಲ್ಲೇ ಜ್ವರ ಇರುವವರನ್ನು ಪತ್ತೆ ಹಚ್ಚಿ, ಕಚೇರಿ ಒಳ ಪ್ರವೇಶಿಸಲು ನಿರ್ಬಂಧಿಸಲು ಸಾಧ್ಯವಾಗುತ್ತದೆ. ತನ್ಮೂಲ ಮೂಲಕ ಸರ್ಕಾರಿ ಕಚೇರಿಗಳಲ್ಲಿರುವವರ ಸುರಕ್ಷತೆಯ ಖಾತ್ರಿ ದೊರೆತಂತಾಗುತ್ತದೆ.

Facebook Comments