ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ : ಸಚಿವ ಸಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ :  ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಆಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ಸರ್ಕಾರ ಕಟಿಬದ್ಧವಾಗಿದೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟದಲ್ಲಿ ನಾನೂ ಕೂಡ ಪಾಲ್ಗೊಂಡಿದ್ದೇನೆ.

5 ಜಿಲ್ಲೆ, 13 ತಾಲೂಕುಗಳ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬುದರಲ್ಲಿ ನಮ್ಮ ಒತ್ತಾಯವೂ ಇದೆ ಎಂದರು. ಸಾವರ್ಕರ್‍ಗೆ ಅವಮಾನ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿರುವ ಸಿಸಿ ಪಾಟೀಲ್ ಅವರು, ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ ಸಾವರ್ಕರ್ ಅವರು, ಅಂಡಮಾನ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೊಳಗಾಗಿದ್ದರು.

ಆ ಜೈಲು ಹೇಗಿದೆ ಎಂಬುದನ್ನು ಸಿದ್ದರಾಮಯ್ಯನವರು ನೋಡಿಕೊಂಡು ಬರಲಿ. ಅನಗತ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.

ಉಪಚುನಾವಣೆಯ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ ಅವರು, ಜೆಡಿಎಸ್‍ನಿಂದ ಬಿಜೆಪಿ ಪಕ್ಷಕ್ಕೆ ಬರುವವರಿಗೆ ಮುಕ್ತ ಅವಕಾಶವಿದೆ ಎಂದರು. ಚುನಾವಣೆಗಾಗಿ ಪಕ್ಷ ಈಗಾಗಲೇ ಎಲ್ಲಾ ಸಿದ್ಧತೆಯನ್ನು ಮಾಡಿ ಕೊಂಡಿದೆ. ಸದ್ಯದಲ್ಲೇ ಹೈಕಮಾಂಡ್ ಅಭ್ಯರ್ಥಿಗಳ ಘೋಷಣೆ ಮಾಡಲಿದೆ ಎಂದು ತಿಳಿಸಿದರು.

Facebook Comments