ಖಾಸಗಿ ಬುಕ್ಕಿಗಳಿಂದ ಸರ್ಕಾರಕ್ಕೆ ನಷ್ಟ, ಟರ್ಫ್ ಕ್ಲಬ್‍ನಲ್ಲಿ ಚುರುಕುಗೊಂಡ ಸಿಸಿಬಿ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.7- ರೇಸ್‍ಕೋರ್ಸ್‍ನಲ್ಲಿ ಖಾಸಗಿ ಬುಕ್ಕಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ನಷ್ಟವುಂಟಾಗಿದೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.  ತನಿಖೆ ಪೂರ್ಣಗೊಂಡ ನಂತರವಷ್ಟೇ ಬುಕ್ಕಿಗಳು ಸರ್ಕಾರಕ್ಕೆ ವಂಚಿಸಿರುವ ಹಣ ಎಷ್ಟೆಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಬೆಂಗಳೂರು ಟರ್ಫ್ ಕ್ಲಬ್‍ನಲ್ಲಿ ಸರ್ಕಾರಕ್ಕೆ ಜಿಎಸ್‍ಟಿ(ತೆರಿಗೆ) ಸಲ್ಲಿಸದೆ ವಂಚನೆ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ನಿನ್ನೆ ದಾಳಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ 96 ಲಕ್ಷ ಹಣ ವಶಪಡಿಸಿಕೊಂಡು 40 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ದಾಳಿ ಸಂದರ್ಭದಲ್ಲಿ ಲೆಕ್ಕ ಬರೆಯುವ ಪುಸ್ತಕ ಸೇರಿದಂತೆ ಹಲವು ದಾಖಲೆಗಳು ಸಿಕ್ಕಿವೆ. ನೂರು ರೂಪಾಯಿಗೆ ಶೇ.28ರಷ್ಟು ತೆರಿಗೆಯನ್ನು ರೇರ್ಸ್‍ಕೋರ್ಸ್‍ನವರು ಸರ್ಕಾರಕ್ಕೆ ಪಾವತಿಸಬೇಕು. ಆದರೆ ಸೂಕ್ತ ಹಣದ ಲೆಕ್ಕ ತೋರಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದುವರೆಗೂ ಎಷ್ಟು ಹಣ ವಂಚಿಸಿದ್ದಾರೆ ಎಂಬುದು ಪೂರ್ಣ ತನಿಖೆ ನಂತರ ತಿಳಿದುಬರಲಿದೆ. ಬೆಟ್ಟಿಂಗ್‍ನಲ್ಲಿ ಕುದುರೆ ಮಾಲೀಕರು, ಬುಕ್ಕಿಗಳು, ಅಧಿಕಾರಿವರ್ಗ, ಸಿಬ್ಬಂದಿಯ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Facebook Comments