ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ಸೆರೆ, 85 ಲಕ್ಷದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.5- ಮಹಿಳೆಯರು, ವೃದ್ಧೆಯರನ್ನು ಗುರುಯಾಗಿಸಿ ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಇರಾನಿ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿ 85 ಲಕ್ಷ ರೂ. ಮೌಲ್ಯದ 1 ಕೆಜಿ 700 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಬು ಹೈದರ್ ಆಲಿ (52), ಹುಸೇನ್ ಆಲಿ (29), ಮೆಹದಿ ಹಸನ್ (45) ಮತ್ತು ಸಾದಿಕ್ (34) ಬಂಧಿತ ಸರಗಳ್ಳರು.

ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಹಿಳೆಯರು, ವೃದ್ಧೆಯರನ್ನು ಗುರಿಯಾಗಿಸಿ ಕ್ಷಣಾರ್ಧದಲ್ಲಿ ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ಪತ್ತೆಗೆ ಸಿಸಿಬಿ ಪೊಲೀಸರು ಮೂರ್ನಾಲ್ಕು ತಿಂಗಳಿನಿಂದ ಶೋಧ ನಡೆಸುತ್ತಿದ್ದರು. ಈ ನಾಲ್ವರನ್ನು ಚೆನ್ನೈ ಜೈಲಿನಿಂದ ಬಾಡಿ ವಾರೆಂಟ್ ಮೇರೆಗೆ ಪೊಲೀಸ್ ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದರು.

ಆರೋಪಿಗಳು ಸರಗಳ್ಳತನ ಮಾಡಿ ಗುಲ್ಬರ್ಗಾ ಮುಂತಾದ ಕಡೆಗಳಲ್ಲಿ ವಿಲೇವಾರಿ ಮಾಡಿದ್ದ 30 ಸರಗಳ್ಳತನ, ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 85 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪೈಕಿ ಅಬು ಹೈದರ್ ಪ್ರಮುಖನಾಗಿದ್ದು, ಇವರು ಕರ್ನಾಟಕ, ತಮಿಳುನಾಡು, ಜಾರ್ಖಂಡ್, ಆಂಧ್ರಪ್ರದೇಶ ರಾಜ್ಯಗಳಲ್ಲೂ ಅಪರಾಧ ಕೃತ್ಯಗಳನ್ನು ಎಸಗಿದ್ದು, ಈ ಹಿಂದೆ ಹಲವಾರು ಬಾರಿ ದಸ್ತಗಿರಿ ಮಾಡಿದ್ದರೂ ಈ ತಂಡವು ಪುನಃ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದರು.

ಆರೋಪಿಗಳು ಕಳವು, ಸುಲಿಗೆ ಮಾಡಿದ್ದ ಚಿನ್ನಾಭರಣಗಳನ್ನು ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯಗಳಲ್ಲಿ ವಿಲೇವಾರಿ ಮಾಡುತ್ತಿದ್ದುದು ತನಿಖೆಯಿಂದ ತಿಳಿದು ಬಂದಿದೆ. ಚೆನ್ನೈ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದಾಗ ಬೆಂಗಳೂರು ನಗರದಲ್ಲಿನ ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಲ್ಲಿನ ಪ್ರಕರಣಗಳ ತನಿಖೆ ನಡೆಸಿದ ಚೆನ್ನೈ ಪೊಲೀಸರು ಜೈಲಿಗೆ ಕಳುಹಿಸಿದ್ದರು.

ಈ ಆರೋಪಿಗಳು ಬೆಂಗಳೂರಿನ ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗಿರುವ ಖಚಿತ ಮಾಹಿತಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.

ನಗರದ ಕೆ.ಆರ್.ಪುರ, ಹೆಣ್ಣೂರು, ಎಚ್‍ಎಎಎಲ್, ರಾಮಮೂರ್ತಿ ನಗರ, ಬೆಳ್ಳಂದೂರು, ಎಚ್‍ಎಸ್‍ಆರ್ ಲೇ ಔಟ್, ಮಹದೇವಪುರ, ಸೋಲದೇವನಹಳ್ಳಿ, ಜೆ.ಬಿನಗರ, ಎಸ್.ಆರ್.ನಗರ, ಬಾಗಲಗುಂಟೆ, ವಿವಿಪುರಂ, ವಿಜಯನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಸುಮಾರು 30 ಸರಗಳ್ಳತನ ಪ್ರಕರಣದ ಮಾಲುಗಳನ್ನು ಗುಲ್ಬರ್ಗ ಮತ್ತಿತರ ಕಡೆಗಳಲ್ಲಿ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕೈಗೊಂಡಿರುತ್ತಾರೆ.

Facebook Comments