ಡ್ರಗ್ಸ್ ವಿರುದ್ಧ ಸಮರ : ಸಾಕ್ಷ್ಯ ಸಂಗ್ರಹಕ್ಕೆ ಪೊಲೀಸರ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.7- ಡ್ರಗ್ಸ್ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಲು ಹರಸಾಹಸ ಪಡುತ್ತಿದ್ದಾರೆ. ಬಂಧಿತರ ವಿರುದ್ಧ 1985ರ ಎನ್‍ಡಿಪಿಎಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆ ಅತ್ಯಂತ ಪ್ರಭಾವಿ ಯಾಗಿದ್ದು, ಭಾರತೀಯ ದಂಡ ಸಂಹಿತೆ(ಐಪಿಸಿ)ಗಿಂತಲೂ ಹೆಚ್ಚು ಪರಿಣಾಮಕಾರಿ ಯಾಗಿದೆ.

ಕಾಯ್ದೆಯಡಿ ಆರೋಪ ದಾಖಲಿಸಿದ ಮೇಲೆ ಸೂಕ್ತ ದಾಖಲೆ ಮತ್ತು ಪುರಾವೆಗಳನ್ನು ಒದಗಿಸುವುದು ಜವಾಬ್ದಾರಿಯುತ ಕೆಲಸವಾಗಿದೆ. ಈಗಾಗಲೇ 12 ಮಂದಿ ವಿರುದ್ಧ ಮಾದಕ ವಸ್ತು ನಿಷೇಧ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ. ಈ ಕಾಯ್ದೆಯಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ತನಿಖೆ ಮಾಡಬೇಕಾಗಿದೆ.

ಆರೋಪಿಗಳನ್ನು ಬಂಧಿಸಲು ಸೂಕ್ತ ಕಾರಣಗಳನ್ನು ನೀಡಬೇಕು. ಆರೋಪಿಗಳ ಮನೆ ಶೋಧ ಮಾಡಿದಾಗ ಮಾದಕ ವಸ್ತುಗಳು ಸಿಕ್ಕಿದರೆ ಅದನ್ನು ಪೊಲೀಸರ ಹೊರತಾದ ವ್ಯಕ್ತಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಬೇಕು. ಮಾದಕ ವಸ್ತುಗಳನ್ನು ಸೇವಿಸುವುದು ಕೂಡ ಕಾಯ್ದೆ ಪ್ರಕಾರ ಅಪರಾದ. ಆದರೆ, ವೈಯಕ್ತಿಕ ಬಳಕೆಗಾಗಿ ಮಾದಕ ವಸ್ತುಗಳನ್ನು ಹೊಂದಿದ್ದರೆ ಅದಕ್ಕೆ ಶಿಕ್ಷೆಯ ಪ್ರಮಾಣ ಕಡಿಮೆ ಇದೆ.

ಒಂದು ವರ್ಷ ಕಠಿಣ ಶಿಕ್ಷೆ, 10ಸಾವಿರ ದಂಡ ವಿಧಿಸುವ ಅವಕಾಶವಿದೆ. ವ್ಯಾಪಾರ ಉದ್ದೇಶಕ್ಕಾಗಿ ಕಡಿಮೆ ಮಾದಕ ವಸ್ತು ಹೊಂದಿದ್ದರೆ ಅದಕ್ಕೆ ಮಾತ್ರ 10 ವರ್ಷ ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ವ್ಯಾಪಾರ ಉದ್ದೇಶಕ್ಕಾಗಿ ಹೆಚ್ಚು ದಾಸ್ತಾನು ಹೊಂದಿದ್ದರೆ ಅಂತಹವರಿಗೆ ಗರಿಷ್ಠ 20 ವರ್ಷ ಶಿಕ್ಷೆ ಮತ್ತು 2 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ.

ಮಾದಕ ವಸ್ತು ದೊರೆತಿದೆ ಎಂದು ಹೇಳಿದರೆ ಸಾಲುವುದಿಲ್ಲ. ಅದನ್ನು ವಾಣಿಜ್ಯ ವ್ಯವಹಾರಕ್ಕೆ ಬಳಸುತ್ತಿದ್ದ ಬಗ್ಗೆ ಸೂಕ್ತ ಪುರಾವೆಗಳು ಬೇಕು. ಆರ್ಥಿಕ ವಹಿವಾಟಿನ ದಾಖಲೆಗಳು ಬೇಕು. ದಾಳಿ ವೇಳೆ ಹಣ ಸಿಕ್ಕಿರಬೇಕು ಎಂಬೆಲ್ಲಾ ನಿಯಮಗಳಿವೆ.

ಸದ್ಯದ ಪ್ರಕರಣಗಳಲ್ಲಿ ಸಾಕಷ್ಟು ಗೊಂದಲಗಳಿವೆ. ನಟಿ ರಾಗಿಣಿ ದ್ವಿವೇದಿ ಅವರ ಮನೆ ಶೋಧನೆ ವೇಳೆ ಮಾದಕ ವಸ್ತುಗಳು ದೊರೆತಿರುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ತನಿಖೆ ಮುಂದುವರೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಮಾದಕ ವಸ್ತುಗಳ ಪ್ರಕರಣದಲ್ಲಿ ಸ್ವಲ್ಪ ಯಾಮಾರಿದರೂ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಪೊಲೀಸರು ಮತ್ತಷ್ಟು ಎಚ್ಚರಿಕೆಯ ಹೆಜ್ಜೆ ಇಟ್ಟು ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸುವ ಪ್ರಯತ್ನ ನಡೆಸುತ್ತಿದ್ದಾರೆ.

Facebook Comments