ಪೊಲೀಸರಿಗೆ ಇರಿದಿದ್ದ  ದುಷ್ಕರ್ಮಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಪೊಲೀಸ್ ಹೆಡ್‍ಕಾನ್‍ಸ್ಟೇಬಲ್‍ಗೆ ಚಾಕುನಿಂದ ಇರಿದು ಪರಾರಿಯಾಗಿದ್ದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಮರ್ಧನ್ ಖಾನ್ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ. ಈತನನ್ನು ಚಿಕಿತ್ಸೆಗಾಗಿ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ನ.30ರಂದು ಕೆಲವು ಪುಂಡ ಪೊಕರಿಗಳು ಧೂಮಪಾನ, ಮದ್ಯಪಾನ ಮಾಡಿ ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಚುಡಾಯಿಸುತ್ತಿದ್ದ ಬಗ್ಗೆ ಚಾಮುಂಡಿನಗರದಲ್ಲಿ ಮಫ್ತಿಯಲ್ಲಿದ್ದ ಹೆಡ್‍ಕಾನ್‍ಸ್ಟೇಬಲ್ ನಾಗರಾಜ್ ಮತ್ತು ಕಾನ್‍ಸ್ಟೇಬಲ್ ಚಂದ್ರಕಾಂತ್ ಅವರಿಗೆ ಮಾಹಿತಿ ಬಂದಿದೆ.

ತಕ್ಷಣ ಇವರಿಬ್ಬರು ಸ್ಥಳಕ್ಕೆ ಹೋಗಿ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿಗಳು ಕೂಗಾಡಿದಾಗ ಆಟೋದಲ್ಲಿ ಇವರನ್ನು ಕುಳಿತುಕೊಳ್ಳಲು ನಾಗರಾಜ್ ಹೇಳುತ್ತಿದ್ದಂತೆ ಚಾಕುವಿನಿಂದ ಇವರ ಹೊಟ್ಟೆಗೆ ಎರಡು ಬಾರಿ ಇರಿದು ರಕ್ಷಣೆಗೆ ಧಾವಿಸಿದ ಚಂದ್ರಕಾಂತ್ ಅವರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಂಡಿದ್ದಾರೆ.

ಘಟನೆ ಸಂಬಂಧ ಅರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರ್.ಟಿ.ನಗರ ಠಾಣೆ ಇನ್‍ಸ್ಪೆಕ್ಟರ್ ತನಿಖೆಗೊಂಡು ಆರೋಪಿ ಮರ್ಧನ್ ಖಾನ್‍ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಆಯುಧಗಳ ಬಗ್ಗೆ ವಿಚಾರಣೆ ನಡೆಸಿದಾಗ ಈರುಳ್ಳಿ ಮೈದಾನದ ಕೆ.ಎಚ್.ಎಂ.ಬ್ಲಾಕ್‍ನಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.

ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಆರೋಪಿಯನ್ನು ಆರ್.ಟಿ.ನಗರ ವ್ಯಾಪ್ತಿಯ ಈರುಳ್ಳಿ ಮೈದಾನಕ್ಕೆ ಕರೆದೊಯ್ದು ಪರಿಶೀಲನೆ ನಡೆಸುತ್ತಿದ್ದಾಗ ಏಕಾಏಕಿ ಬೆಂಗಾವಲಿನಲ್ಲಿದ್ದ ಪೊಲೀಸ್ ಸಿಬ್ಬಂದಿಗಳಾದ ಶ್ರೀಧರ್ ಮೂರ್ತಿ ಮತ್ತು ಮುತ್ತಪ್ಪ ಅವರ ಮೇಲೆಯೇ ಅಲ್ಲಿಯೇ ಇಟ್ಟಿದ್ದ ಚಾಕುವಿನಿಂದ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿದ್ದಾನೆ.

ತಕ್ಷಣ ಇನ್‍ಸ್ಪೆಕ್ಟರ್ ಮಿಥುನ್ ಶಿಲ್ಪಿಯವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಇನ್‍ಸ್ಪೆಕ್ಟರ್ ಮಾತನ್ನು ಲೆಕ್ಕಿಸದೆ ಪೊಲೀಸರ ಮೇಲೆ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಎರಡು ಗುಂಡುಗಳು ಆರೋಪಿಯ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರೋಪಿ ಮರ್ಧನ್ ಖಾನ್ ವಿರುದ್ಧ ಆರ್.ಟಿ.ನಗರ ಠಾಣೆಯಲ್ಲಿ ಎರಡು ಹಲ್ಲೆ, ಒಂದು ದೊಂಬಿ ಪ್ರಕರಣ ದಾಖಲಾಗಿದೆ. ಅಲ್ಲದೆ ನವೆಂಬರ್ ತಿಂಗಳಿನಲ್ಲಿ ಪತ್ನಿ ಮನೆಯವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಆರೋಪಿ ಬಗ್ಗೆ ಆರ್‍ಟಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments