ಉಗ್ರರರನ್ನು ವಶಕ್ಕೆ ಪಡೆಯಲು ಚೆನ್ನೈಗೆ ತೆರಳಿದ ಸಿಸಿಬಿ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14- ದಕ್ಷಿಣ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಈಗ ಚೆನ್ನೈ ಪೊಲೀಸರ ವಶದಲ್ಲಿರುವ ಇಬ್ಬರು ಉಗ್ರಗಾಮಿಗಳನ್ನು ರಾಜ್ಯಕ್ಕೆ ಕರೆತರಲು ಸಿಸಿಬಿ ವಿಶೇಷ ತಂಡ ತಮಿಳುನಾಡಿಗೆ ತೆರಳಿ ಮುಂದಿನ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.  ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು ಅವರ ಸೂಚನೆ ಮೇರೆಗೆ ಸಿಸಿಬಿ ಪೊಲೀಸರ ತಂಡ ಚೆನ್ನೈಗೆ ತೆರಳಿ ಅಲ್ಲಿನ ಪೊಲೀಸರ ವಶದಲ್ಲಿರುವ ಉಗ್ರರನ್ನು ರಾಜ್ಯಕ್ಕೆ ಕರೆತರಲು ಅಗತ್ಯವಾದ ಕ್ರಮ ಕೈಗೊಂಡಿದೆ.

ನ್ಯಾಯಾಲಯಕ್ಕೆ ಬಾಡಿವಾರೆಂಟ್ ಸಲ್ಲಿಸಿ ಆ ಮೂಲಕ ಉಗ್ರರನ್ನು ಬೆಂಗಳೂರಿಗೆ ಕರೆತಂದು ಮತ್ತಷ್ಟು ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವುದು ಪೊಲೀಸರ ಉದ್ದೇಶವಾಗಿದೆ.  ಈಗಾಗಲೇ ಸಿಸಿಬಿ ಉನ್ನತಾಧಿಕಾರಿಗಳು ತಮಿಳುನಾಡು ಪೊಲೀಸ್ ಇಲಾಖೆಯ ಕ್ಯೂ ವಿಶೇಷ ತಂಡದ ಹಿರಿಯ ಅಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದಾರೆ.

ಉಗ್ರರನ್ನು ಬೆಂಗಳೂರಿಗೆ ಕರೆತಂದು ಅವರನ್ನು ತೀವ್ರ ವಿಚಾರಣೆಗೊಳಪಡಿಸಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲು ಸಹಕಾರ ನೀಡುವಂತೆ ತಮಿಳುನಾಡು ಪೊಲೀಸ್ ಉನ್ನತಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.  ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎನ್ನಲಾದ ಶಂಕಿತ ಉಗ್ರರ ಜತೆಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ಕೋಲಾರದ ಇಬ್ಬರನ್ನು ಚೆನೈನ ಕ್ಯೂ ಬ್ರಾಂಚ್ ಪೊಲೀಸರು ವಶಕ್ಕೆ ಪಡೆದಿದ್ದರು.

ಈ ಇಬ್ಬರು ಶಂಕಿತ ಉಗ್ರರೊಂದಿಗೆ ವಿದೇಶಕ್ಕೆ ಪಲಾಯನ ಮಾಡಲು ಸಂಚು ರೂಪಿಸಿದ್ದರುಎಂದು ಮಾಹಿತಿ ಲಭಿಸಿದೆ. ಬೆಂಗಳೂರಿನ ಪ್ರಶಾಂತ್‍ನಗರದ ನೆಲೆಸಿದ್ದ ಮೊಹಮದ್ ಜಹೀದ್(24) ಹಾಗೂ ಬೀಡಿ ಕಾಲೋನಿಯ ಇಮ್ರಾನ್ ಖಾನ್(42) ಎಂದು ಗುರುತಿಸಲಾಗಿದೆ. ಇವರಲ್ಲಿ ಜಹೀದ್ ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮನೆಯಲ್ಲೇ ಇದ್ದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಹೇಳಲಾಗಿದೆ.

ಚೆನ್ನೈನಲ್ಲೂ ತೀವ್ರ ಶೋಧ: ಶಂಕಿತ ಉಗ್ರರಿಗಾಗಿ ನಗರದಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆ ಈಗ ಕೋಲಾರಕ್ಕೂ ವಿಸ್ತರಿಸಿ ಮತ್ತಿಬ್ಬರು ಸೆರೆ ಸಿಕ್ಕ ಹಿನ್ನೆಲೆಯಲ್ಲಿ ಮತ್ತಷ್ಟು ಕಾರ್ಯಾಚರಣೆ ಮುಂದುವರೆದಿದೆ.  ಬಂಧಿತರನ್ನು ಈಗಾಗಲೇ ತಮಿಳುನಾಡಿನ ಕ್ಯೂ ವಿಶೇಷ ತಂಡ ವಿಚಾರಣೆಗೊಳಪಡಿಸಿ ಹೆಚ್ಚಿನ ವಿವರಗಳನ್ನು ಕಲೆ ಹಾಕಿದ್ದು, ರಾಜ್ಯದ ವಿವಿಧೆಡೆ ಇರುವ ಮುಸ್ಲಿಂ ಉಗ್ರಗಾಮಿ ಸಂಘಟನೆಗಳೊಂದಿಗೆ ಇವರಿಗೆ ಇರಬಹುದಾದ ನಂಟು ಮತ್ತು ಪೂರ್ವಯೋಜಿತ ವಿಧ್ವಂಸಕ ಕೃತ್ಯದ ಸಂಚಿನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.

ಈ ಉಗ್ರರು ನೀಡಿದ ಮಾಹಿತಿ ಮೇರೆಗೆ ರಾಜಧಾನಿ ಚೆನ್ನೈ ಸೇರಿದಂತೆ ವಿವಿಧೆಡೆ ಮತ್ತಷ್ಟು ಶಂಕಿತ ಉಗ್ರರಿಗಾಗಿ ವಿಶೇಷ ಪೊಲೀಸ್ ತಂಡ ಶೋಧ ನಡೆಸುತ್ತಿದೆ. ಚೆನ್ನೈ ಪೊಲೀಸರು ಕರ್ನಾಟಕದ ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸುವ ಸಾದ್ಯತೆ ಇದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

Facebook Comments