ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.30- ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮೇಲೆ ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮಾದಕ ವಸ್ತು ಪತ್ತೆಮಾಡಿ ವಶಪಡಿಸಿಕೊಂಡಿದ್ದಾರೆ. ಕಾರಾಗೃಹದಲ್ಲಿದ್ದುಕೊಂಡೇ ರೌಡಿಗಳು,ಖೈದಿಗಳು ಅಪರಾಧ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಾರೆ. ಕಾರಾಗೃಹ ಅಕ್ರಮಗಳ ಅಡ್ಡೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕಾನೂನು ಬಾಹಿರ ವ್ಯವಹಾರಗಳು ನಡೆಯುತ್ತಿವೆ ಎಂಬ ಮಾಹಿತಿ ಮೇರೆಗೆ ಈ ದಾಳಿ ಮಾಡಲಾಗಿದೆ.

ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಕಾರಾಗೃಹದ ಕೆಲವು ಬ್ಯಾರಕ್ ಗಳಲ್ಲಿ ಗಾಂಜಾ ಪ್ಯಾಕೇಟ್‍ಗಳು, ಗಾಂಜಾ ಸೇದುವ ಪೈಪ್‍ಗಳು ಪತ್ತೆಯಾಗಿವೆ. ಹೀಗಾಗಿ ಕಾರಾಗೃಹದ ಮೂಲೆ ಮೂಲೆಯಲ್ಲಿಯೂ ಶೋಧ ನಡೆಸಿದ್ದಾರೆ. ಸಿಸಿಬಿ ಪೋಲೀಸರು ಮತ್ತು ಕಾರಾಗೃಹದ ಅಧಿಕಾರಿಗಳು ಇಂದು ಬೆಳಿಗ್ಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಕೆಲವು ರೌಡಿಗಳು ಜೈಲಿನಲ್ಲಿದ್ದು ಕೊಂಡೇ ತಮ್ಮ ಸಹಚರರ ಮೂಲಕ ನಗರದಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ , ಬೆದರಿಕೆ, ಹಫ್ತಾ ವಸೂಲಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಸಿಸಿಬಿ ಪೋಲಿಸರು ಈ ದಾಳಿ ನಡೆಸುವ ಮೂಲಕ ರೌಡಿಗಳಿಗೆ , ಖೈದಿಗಳ ಹಾಗೂ ವಿಚಾರಾಣಾೀನ ಖೈದಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಾರಾಗೃಹದಲ್ಲಿ ನಡೆಯುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ಈ ದಾಳಿ ನಡೆದಿದೆ. ಆಗಾಗ್ಗೆ ಈ ರೀತಿಯ ದಾಳಿ ನಡೆಯುತ್ತಿದ್ದು ,ಕೆಲವು ಖೈದಿಗಳು, ರೌಡಿಗಳು ಹಾಗೂ ವಿಚಾರಣಾೀನ ಖೈದಿಗಳ ಮೇಲೆ ಜೈಲು ಅಧಿಕಾರಿಗಳು ನಿಗಾ ಇಟ್ಟಿರುತ್ತಾರೆ ಎಂದು ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.

ಅಪರಾಧ ವಿಭಾಗದ ಜಂಟಿ ಪೋಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಇಬ್ಬರು ಡಿಸಿಪಿಗಳು ಮೂವರು ಎಸಿಪಿ ಮತ್ತು 15 ಮಂದಿ ಇನ್ಸ್‍ಪೆಕ್ಟ್‍ರ್‍ಗಳು ಕಾರಾಗೃಹ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಕೆಲವು ಬ್ಯಾರಕ್‍ಗಳಲ್ಲಿ ಮಾದಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಗೆ ಸಿಸಿಬಿ ಪೋಲೀಸರು ದೂರು ನೀಡಿದ್ದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments