ಡ್ರಗ್ಸ್ ಜಾಲದಲ್ಲಿ ತುಪ್ಪದ ಹುಡುಗಿ, ಫ್ಲಾಟ್ ಮೇಲೆ ದಾಳಿ, ಸಿಸಿಬಿ ವಶಕ್ಕೆ ರಾಗಿಣಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.4- ದಿನಕ್ಕೊಂದು ಸ್ಫೋಟಕ ತಿರುವು ಪಡೆದುಕೊಳ್ಳುತ್ತಿರುವ ಡ್ರಗ್ಸ್ ಜಾಲ ಪ್ರಕರಣದಲ್ಲಿ ಇದೀಗ ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ಖ್ಯಾತಿಯ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ಖೆಡ್ಡಾ ತೋಡಿದ್ದಾರೆ.

ನಿನ್ನೆಯಷ್ಟೇ ರವಿಶಂಕರ್‍ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆಯೇ ಪೊಲೀಸರು ರಾಗಿಣಿ ಅವರ ಯಲಹಂಕದ ಫ್ಲಾಟ್ ಮೇಲೆ ದಾಳಿ ನಡೆಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಇದರಿಂದಾಗಿ ಸ್ಯಾಂಡಲ್‍ವುಡ್‍ನ ಡ್ರಗ್ಸ್ ಜಾಲ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಇನ್ನು ಕೆಲವರ ಕೊರಳಿಗೆ ಸುತ್ತಿಕೊಳ್ಳುವ ಸಾಧ್ಯತೆಗಳಿವೆ. ಸಿಸಿಬಿಯ ಇನ್‍ಸ್ಪೆಕ್ಟರ್ ಅಮರ್ ನಾಯಕ್ ನೇತೃತ್ವದ ನಾಲ್ವರು ಮಹಿಳಾ ಕಾನ್‍ಸ್ಟೆಬಲ್‍ಗಳು ಸೇರಿದಂತೆ ಒಟ್ಟು ಆರು ಮಂದಿ ತಂಡ ಯಲಹಂಕ ನ್ಯಾಯಾಂಗ ಬಡಾವಣೆಯ ಅಪಾರ್ಟ್‍ಮೆಂಟ್‍ನಲ್ಲಿರುವ ರಾಗಿಣಿ ನಿವಾಸದ ಮೇಲೆ ಬೆಳಗ್ಗೆ 6.30ಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 10 ಗಂಟೆವರೆಗೂ ಮನೆಯ ಮೂಲೆ ಮೂಲೆಗಳನ್ನೂ ಶೋಧಿಸಿದರು.

ರಾಗಿಣಿ ಅಪಾರ್ಟ್‍ಮೆಂಟ್‍ನ ಅಡುಗೆ ಮನೆ, ಬೆಡ್ ರೂಂ, ಹಾಲ್, ಹೊರಾಂಡ, ಹೂಕುಂಡ ಸೇರಿದಂತೆ ಎಲ್ಲಾ ಕಡೆ ಪೊಲೀಸರು ಶೋಧ ನಡೆಸಿದ್ದಾರೆ.

ರಾಗಿಣಿ ಅವರ ನಾಲ್ಕು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮೊಬೈಲ್‍ನಲ್ಲಿದ್ದ ಎಲ್ಲ ಮೆಸೇಜ್‍ಗಳನ್ನೂ ಡಿಲೀಟ್ ಮಾಡಲಾಗಿದೆ. ಮೊಬೈಲ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಗಿಣಿ ನಿವಾಸದಲ್ಲೇ ಸುಮಾರು ನಾಲ್ಕು ತಾಸುಗಳ ಕಾಲ ಪೊಲೀಸರು ವಿಚಾರಣೆಗೊಳಪಡಿಸಿದರು. ಆದರೆ, ಆಕೆ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಸಿಸಿಬಿ ಪೊಲೀಸರ ವಶದಲ್ಲಿರುವ ರವಿಶಂಕರ್ ಕೇವಲ ನನ್ನ ಸ್ನೇಹಿತ ಅಷ್ಟೆ. ಆತನ ಡ್ರಗ್ಸ್ ದಂಧೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದರು. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ರಾಗಿಣಿ ಅವರನ್ನು ವಶಕ್ಕೆ ಪಡೆದು ಸಿಸಿಬಿ ಕೇಂದ್ರ ಕಚೇರಿಗೆ ಪೊಲೀಸರು ಕರೆತಂದಿದ್ದಾರೆ.

ಸಿಸಿಬಿ ಪೊಲೀಸರ ವಶದಲ್ಲಿರುವ ರವಿಶಂಕರ್ ಹೇಳಿಕೆಯನ್ನಾಧರಿಸಿ ರಾಗಿಣಿ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ನೋಟಿಸ್ ತಡವಾಗಿ ತಲುಪಿದ್ದರಿಂದ ನಿನ್ನೆ ವಿಚಾರಣೆಗೆ ಹಾಜರಾಗಬೇಕಿದ್ದ ರಾಗಿಣಿ ಅವರು ಸಿಸಿಬಿ ವಿಚಾರಣೆಗೆ ತಮ್ಮ ವಕೀಲರನ್ನು ಕಳುಹಿಸಿ ನಾನು ಸೋಮವಾರ ವಿಚಾರಣೆಗೆ ಹಾಜರಾಗುವುದಾಗಿ ಹೇಳಿಕೆ ನೀಡಿದ್ದರು.

ಆದರೆ, ಪೊಲೀಸರು ಸೋಮವಾರದವರೆಗೂ ಕಾಯಲು ಸಾಧ್ಯವಿಲ್ಲ. ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅದಕ್ಕೆ ರಾಗಿಣಿ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡ ಪೊಲೀಸರು ಬೆಳ್ಳಂಬೆಳಗ್ಗೆ ರಾಗಿಣಿ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

Facebook Comments