ಸಿಸಿಬಿ ಮುಂದೆ ಅಕುಲ್, ಸಂತೋಷ್‍, ಯುವರಾಜ್ ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19- ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಟ, ನಿರೂಪಕ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಚಾಮರಾಜಪೇಟೆಯಲ್ಲಿನ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ನಟ, ನಿರೂಪಕ ಅಕುಲ್ ಬಾಲಾಜಿ, ಮಾಜಿ ಶಾಸಕ ಆರ್.ವಿ.ದೇವರಾಜ್ ಅವರ ಪುತ್ರ ಮಾಜಿ ಕಾಪೆರ್ರೇಟರ್ ಆರ್.ವಿ.ಯುವರಾಜ್ ಮತ್ತು ನಟ ಸಂತೋಷ್‍ಕುಮಾರ್ ಅವರನ್ನು ಸಿಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿ ಮೂವರ ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾದಕ ವಸ್ತು ಜಾಲದಲ್ಲಿ ಈಗಾಗಲೇ ಬಂಧಿತರಾಗಿರುವ ಇಬ್ಬರು ನಟಿಯರು , ಡ್ರಗ್ಸ್ ಪೆಡ್ಲರ್‍ಗಳು, ಪಾರ್ಟಿ ಆಯೋಜಕರು ನಿಮಗೆ ಪರಿಚಯಸ್ಥರೇ , ಸ್ನೇಹಿತರೇ ಆಗಿದ್ದಲ್ಲಿ ಎಷ್ಟು ವರ್ಷಗಳಿಂದ ನಿಮ್ಮ -ಅವರ ಸ್ನೇಹವಿದೆ. ಅವರುಗಳ ಮಧ್ಯೆ ನಿಮ್ಮ ಯಾವ ಯಾವ ವ್ಯವಹಾರಗಳಿವೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ತನಿಖಾಧಿಕಾರಿಗಳು ಉತ್ತರ ಪಡೆದುಕೊಂಡಿದ್ದಾರೆ.

ಅವರು ಆಯೋಜಿಸಿದ್ದ ಪಾರ್ಟಿಗಳಿಗೆ ನೀವು ಹೋಗುತ್ತಿದ್ದರೇ? ಹಾಗಿದ್ದಲ್ಲಿ ಎಲ್ಲೆಲ್ಲಿ ಪಾರ್ಟಿಗಳು ನಡೆಯುತ್ತಿದ್ದವು ಎಂಬಿತ್ಯಾದಿ ಸಾಮಾನ್ಯ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಮೂವರಿಗೂ ವಿಚಾರಣೆ ಸಂದರ್ಭದಲ್ಲಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ.

ನಿರೂಪಕ ಅಕುಲ್ ಬಾಲಾಜಿ ಅವರನ್ನು ವಿಚಾರಣೆಗೊಳಪಡಿಸಿದ ತನಿಖಾಧಿಕಾರಿಗಳು ವೀರೇನ್ ಖನ್ನಾ ನಿಮಗೆ ಗೊತ್ತೇ? ನಿಮ್ಮ ಫಾರಂಹೌಸ್ ಎಲ್ಲಿದೆ? ಅದನ್ನು ಯಾರಿಗೆ ಗುತ್ತಿಗೆಗೆ ಕೊಟ್ಟಿದ್ದೀರಿ? ಅಲ್ಲಲ್ಲಿ ಏನೇನು ನಡೆಯುತ್ತಿತ್ತು ಎಂಬುದು ನಿಮಗೆ ಗೊತ್ತಾ ಎಂಬಿತ್ಯಾದಿ ವಿಷಯಗಳ ಬಗ್ಗೆ ಉತ್ತರ ಪಡೆದುಕೊಂಡಿದ್ದಾರೆ.

ನಟ ಸಂತೋಷ್ ಅವರನ್ನು ವಿಚಾರಣೆಗೊಳಪಡಿಸಿದ ತನಿಖಾಧಿಕಾರಿಗಳು ನಿಮಗೆ ವೈಭವ ಜೈನ್ ಪರಿಚಯವೇ? ಎಷ್ಟು ವರ್ಷಗಳಿಂದ ನಿಮಗೆ ಅವರು ಗೊತ್ತು. ನಿಮ್ಮ ಅವರುಗಳ ಮಧ್ಯೆ ವ್ಯವಹಾರ ಇದೆಯೇ? ನಿಮ್ಮ ವಿಲ್ಲಾವನ್ನು ಅವರಿಗೆ ಬಾಡಿಗೆಗೆ ಕೊಟ್ಟಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಪಾಲಿಕೆ ಮಾಜಿ ಸದಸ್ಯ ಆರ್.ವಿ.ಯುವರಾಜ್ ಅವರನ್ನು ಸಹ ವಿಚಾರಣೆಗೊಳಪಡಿಸಿ ನೀವು ಪಾರ್ಟಿಗೆ ಹೋಗುತ್ತಿದ್ರಾ? ಒಂದು ವೇಳೆ ಹೋಗಿದ್ದರೆ ಎಲ್ಲೆಲ್ಲಿ ಪಾರ್ಟಿಗಳು ನಡೆಯುತ್ತಿತ್ತು. ಆ ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿತ್ತಾ? ಆ ಪಾರ್ಟಿಗೆ ಯಾರ್ಯಾರು ಬರುತ್ತಿದ್ದರು ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ವಿಚಾರಣೆಗೆ ಹಾಜರಾಗುವ ಮುನ್ನ ಸಿಸಿಬಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸಂತೋಷ್, ನನಗೆ ವೈಭವ್ ಪರಿಚಯಸ್ಥ. ಮೂರು ಬಾರಿ ಆತನಿಗೂ ನನಗೂ ಜಗಳವಾಗಿದೆ. ಈಗ ನನಗೂ ಅವನಿಗೂ ಸಂಬಂಧವಿಲ್ಲ. ನಿನ್ನೆ ಸಿಸಿಬಿಯಿಂದ ನೋಟಿಸ್ ಬಂದಿದೆ. ಹಾಗಾಗಿ ಮೈಸೂರಿನಿಂದ ವಿಚಾರಣೆಗೆ ಬಂದಿದ್ದೇನೆ. ನನಗೆ ಗೊತ್ತಿರುವ ಎಲ್ಲಾ ಮಾಹಿತಿಗಳನ್ನು ಸಿಸಿಬಿ ಮುಂದೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ನಿರೂಪಕ ಅಕುಲ್ ಬಾಲಾಜಿ ಅವರು ಸಿಸಿಬಿ ಕಚೇರಿ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾನು ಹೈದರಾಬಾದ್‍ನಿಂದ ಬಂದಿದ್ದೇನೆ. ಹಾಗಾಗಿ ತಡವಾಗಿದೆ. ನನಗೆ ಏನು ಗೊತ್ತಿದೆಯೋ ಅದನ್ನು ಸಿಸಿಬಿ ಮುಂದೆ ಹೇಳುತ್ತೇನೆ. ಫಾರಂಹೌಸ್ ಗುತ್ತಿಗೆಗೆ ನೀಡಿರುವ ದಾಖಲೆ ತಂದಿದ್ದೇನೆ. ವಿಚಾರಣೆ ಸಂದರ್ಭದಲ್ಲಿ ನನಗೆ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ಹೇಳುತ್ತೇನೆ.

ವೈಭವ್ ಜೈನ್ ಹಾಯ್ ಬಾಯ್ ಪರಿಚಯವಷ್ಟೆ. ನನ್ನ ತಾಯಿ ತಪ್ಪು ಮಾಡದಿದ್ದರೆ ಹೆದರಬೇಡ ಎಂದು ಹೇಳಿದ್ದಾರೆ. ನಾನು ತಪ್ಪು ಮಾಡಿಲ್ಲ. ನನಗೆ ತಿಳಿದಿರುವ ಎಲ್ಲಾ ಮಾಹಿತಿಯನ್ನು ಸಿಸಿಬಿಗೆ ಹೇಳುತ್ತೇನೆ. ಇದೊಂದು ಒಳ್ಳೆಯ ಕೆಲಸ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು. ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಈ ಮೂವರಿಗೂ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದ್ದರು.

Facebook Comments