ವೈರಲ್ ಆಯ್ತು ತಮಿಳುನಾಡಿನ ವೃದ್ಧ ದಂಪತಿ ಸಾಹಸದ ವಿಡಿಯೋ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ: ವೃದ್ಧ ದಂಪತಿ ದರೋಡೆಕೋರರೊಂದಿಗೆ ಹೋರಾಡಿದ ಸಾಹಸಮಯ ಘಟನೆಯೊಂದು ತಮಿಳುನಾಡಿನ ತಿರುವನ್ವೇಲಿಯಲ್ಲಿ ನಡೆದಿದೆ. ಈ ಘಟನೆ ಭಾನುವಾರ ರಾತ್ರಿ ನಡೆದಿದೆ. 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದ ವೃದ್ಧ ದಂಪತಿಯಾಗಿದ್ದಾರೆ.

ಇವರು ಇಬ್ಬರು ದರೋಡೆಕೋರರೊಂದಿಗೆ ಹೋರಾಟ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ದಂಪತಿಯ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದಂಪತಿ ಭಾನುವಾರ ರಾತ್ರಿ ಊಟ ಮುಗಿಸಿ ಕಡಾಯಮ್ ನ ತಮ್ಮ ಮನೆಯ ಹೊರಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಪತ್ನಿ ಎದ್ದು ಮನೆಯೊಳಗೆ ಹೋಗುತ್ತಾರೆ.

ಪತಿ ಅಲ್ಲೇ ಕುಳಿತಿದ್ದು, ಅವರ ಹಿಂದಿನಿಂದ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬರುತ್ತಾನೆ. ಅಲ್ಲದೆ ಆತ ತನ್ನ ಕೈಯಲಿದ್ದ ಟವೆಲನ್ನು ಅಜ್ಜನ ಕುತ್ತಿಗೆಗೆ ಸುತ್ತಿ ಅಲ್ಲೇ ಕಂಬಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಅಲ್ಲಿಗೆ ಆಗಮಿಸುತ್ತಾನೆ.

ಇದರಿಂದ ಗಾಬರಿಗೊಂಡ ಶನ್ಮುಗವೆಲ್ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಪತ್ನಿ ಮನೆಯೊಳಗಿಂದ ಓಡಿ ಬಂದಿದ್ದು, ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರೂ ದಾಳಿಕೋರರ ವಿರುದ್ಧ ಹೋರಾಡಿದ್ದಾರೆ. ಈ ಮೂಲಕ ಅವರಿಂದ ಅಜ್ಜ ಬಚಾವ್ ಆಗಿದ್ದಾರೆ.

ದರೋಡೆಕೋರರಲ್ಲಿ ಕೈಯಲ್ಲಿ ಆಯುಧವಿದ್ದು ವೃದ್ಧ ದಂಪತಿಯ ಕೊಲೆಗೆ ಯತ್ನಿಸಿದ್ದಾರೆ. ಆದರೆ ದಂಪತಿ ಅಲ್ಲೇ ಇದ್ದ ಕುರ್ಚಿಗಳಿಂದ ದರೋಡೆಕೋರರ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೂ ಬಿಡದ ಖದೀಮರು ತಮ್ಮ ಕೈಯಲ್ಲಿದ್ದ ಆಯುಧಗಳಿಂದ ಎಲ್ಲೆಂದರಲ್ಲಿ ಕಡಿದಿದ್ದಾರೆ. ಪರಿಣಾಮ ವೃದ್ಧರು ಹೋರಾಡಿದ ಕುರ್ಚಿಯೆಲ್ಲ ಪೀಸ್ ಪೀಸ್ ಆಗಿದೆ.

ಆ ಪೀಸ್ ನಿಂದಲೇ ದಂಪತಿ ಕೂಡ ಬಿಡದೇ ದರೋಡೆಕೋರರನ್ನು ಹಿಮ್ಮೆಟ್ಟಿಸಿದ್ದಾರೆ. ಬಳಿಕ ಏನೂ ಮಾಡಲು ಸಾಧ್ಯವಾಗದೇ ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ವೃದ್ಧ ದಂಪತಿಯ ಧೈರ್ಯವನ್ನು ಜನ ಕೊಂಡಾಡುತ್ತಿದ್ದಾರೆ.

Facebook Comments

Sri Raghav

Admin