ಸಿಡಿ ಬ್ಲಾಕ್‍ಮೇಲ್ ಕಡಿವಾಣಕ್ಕೆ ಕಾನೂನು ಅಸ್ತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.7- ರಾಜಕಾರಣಿಗಳ ಅನೈತಿಕ ಚಟುವಟಿಕೆಗಳನ್ನು ಪ್ರಶ್ನಿಸುವವರನ್ನು ಮಟ್ಟ ಹಾಕಲು ಕಠಿಣ ಕಾನೂನು ರೂಪಿಸುವ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ರಾಸಲೀಲೆ ಸಿಡಿ ಬಹಿರಂಗವಾದ ನಂತರದ ಬೆಳವಣಿಗೆಗಳು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಬಹಳಷ್ಟು ಮಂದಿಗೆ ಒಳಗೊಳಗೆ ಆತಂಕ ಸೃಷ್ಟಿಯಾಗಿದ್ದು, ಇನ್ನು ಮುಂದೆ ಈ ರೀತಿಯ ಮಾನಹಾನಿಯಾಗುವಂತಹ ಸಿಡಿಗಳನ್ನು ಬಹಿರಂಗ ಪಡಿಸದಂತೆ ತಡೆಯಾಜ್ಞೆ ನೀಡಲು ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯ ಕೂಡ ಅದನ್ನು ಮನ್ನಿಸಿದೆ.

ಇನ್ನೂ ಕೆಲವರು ಪ್ರತಿ ದಿನವೂ ದುಗುಡ, ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು, ಆರ್‍ಟಿಐ ಕಾರ್ಯಕರ್ತರು ತಪ್ಪು ಮಾಡಿದವರಿಗೆ ಸಿಂಹಸ್ವಪ್ನವಾಗಿದ್ದಾರೆ. ಪ್ರಸ್ತುತ ಇರುವ ಕಾನೂನುಗಳು ಮಾಹಿತಿ ಬಹಿರಂಗ ಪಡಿಸುವವರಿಗೆ ಬೆನ್ನೆಲುಬಾಗಿವೆ.  ತಪ್ಪು ಮಾಡಿದವರು ಅಸಾಹಯಕರಾಗಿ ಕೈ ಕೈ ಹಿಸುಕಿಕೊಳ್ಳುವುದನ್ನು ಬಿಟ್ಟು ಬೇರೆನೂ ಮಾಡಲಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ವ್ಯವಸ್ಥೆಗೆ ಮಾರ್ಪಾಡು ತರಲು ಗಂಬೀರ ಚಿಂತನೆ ನಡೆದಿದೆ.

ಯಾವುದೋ ಒಂದು ಪಕ್ಷವಲ್ಲ ಎಲ್ಲಾ ಪಕ್ಷಗಳ ನಾಯಕರು ಸಿಡಿ ಭಯದಲ್ಲಿ ನರಳುತ್ತಿದ್ದಾರೆ. ಈ ಮೊದಲು ಇಬ್ಬರು ಸಚಿವರು ಸಿಡಿ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಈಗ ರಮೇಶ್ ಜಾರಕಿಹೊಳಿ ಅವರ ತಲೆ ದಂಡವಾಗಿದೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಜನಪ್ರತಿನಿಗಳ ಸಿಡಿಗಳಿವೆ ಎಂದು ಆರ್‍ಟಿಐ ಕಾರ್ಯಕರ್ತ ರಾಜಶೇಖರ್ ಮಲಾಲಿ ಹೇಳಿದ್ದಾರೆ.

ಜನಪ್ರತಿನಿಗಳನ್ನು ಖೆಡ್ಡಾಗೆ ಬೀಳಿಸಿ ನಂತರ ಬ್ಲಾಕ್ ಮೇಲ್ ಮಾಡುವ ವ್ಯವಸ್ಥಿತ ತಂಡವೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ ಎಂದು ರಾಜಶೇಖರ್ ಬಹಿರಂಗ ಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರ ಸಿಡಿಯ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬ ಆರೋಪದಲ್ಲಿ ದೂರುದಾರ ದಿನೇಶ್ ಕಲ್ಲಳ್ಳಿ ಅವರನ್ನೇ ವಿಚಾರಣೆಗೆ ಒಳಪಡಿಸಲಾಗಿದೆ. ಹೇಳಿಕೆ ನೀಡಿದ ರಾಜಶೇಖರ್ ಮಲಾಲಿಗೂ ನೋಟಿಸ್ ನೀಡಲಾಗಿದೆ.

ಮುಂದೆ ಈ ರೀತಿಯ ಸಿಡಿಗಳು ಯಾವ ರೀತಿ, ಯಾವ ಮೂಲದಿಂದ ಹೊರ ಬರಬಹುದೋ ಎಂಬ ಆತಂಕ ತಪ್ಪು ಮಾಡಿರುವ ಜನ ಪ್ರತಿನಿಗಳನ್ನು ಕಾಡುತ್ತಿದೆ. ಹೀಗಾಗಿ ಸಿಡಿ ಸಿಡಿಸುವವರನ್ನು ಹತೋಟಿಗೆ ತರಲು ಪ್ರಬಲ ಕಾನೂನು ರೂಪಿಸಬೇಕು ಎಂಬ ಚಿಂತನೆ ನಡೆದಿದೆ.

ಈ ರೀತಿ ಕಾನೂನು ತರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪವೂ ವ್ಯಕ್ತವಾಗಿದೆ. ಜನಪ್ರತಿನಿಗಳು ತಮ್ಮ ಅಕಾರ ದುರುಪಯೋಗ ಮಾಡಿಕೊಂಡು ಅನೈತಿಕ ಚಟುವಟಿಕೆ ಮಾಡುವುದರ ನಿಯಂತ್ರಣಕ್ಕೆ ಮೊದಲು ಕಠಿಣ ಕಾನುನು ರೂಪಿಸಬೇಕು. ಅದನ್ನು ಬಿಟ್ಟು ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನೊಂದೆಡೆ ಪ್ರಭಾವಿಗಳನ್ನು ಹೆದರಿಸಲು ಹನಿಟ್ರ್ಯಾಪ್‍ನಂತಹ ದಂಧೆಗಳು ಶುರುವಾಗಿವೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಂತ್ರಜ್ಞಾನವನ್ನು ಬಳಸಿಕೊಂಡು ನಕಲಿ ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಅವುಗಳನ್ನು ಬಳಸಿಕೊಂಡು ಬ್ಲಾಕ್‍ಮೇಲ್ ಮಾಡುತ್ತಾರೆ.

ಇದರಿಂದ ಮಾನಸಿಕ ಒತ್ತಡಕ್ಕೆ ಸಿಲುಕಿದ ಪ್ರಭಾವಿಗಳು ಬ್ಲಾಕ್‍ಮೇಲರ್‍ಗಳು ಹೇಳಿದಂತೆ ಕೇಳಲಾರಂಭಿಸುತ್ತಾರೆ. ಅದು ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದಕ್ಕಾಗಿ ಕಡಿವಾಣ ಅಗತ್ಯ ಎಂಬ ಪ್ರತಿವಾದಗಳು ಕೇಳಿ ಬಂದಿವೆ.

ಕಠಿಣ ಕಾನೂನು ರೂಪಿಸುವ ಕುರಿತಂತೆ ಎಲ್ಲಾ ಪಕ್ಷಗಳಲ್ಲೂ ಬೆಂಬಲ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ತಿದ್ದುಪಡಿ ತರುವ ಗಂಭೀರ ಚಿಂತನೆ ಆರಂಭವಾಗಿದೆ.

Facebook Comments

Sri Raghav

Admin