ಯುವತಿ ಹೇಳ್ತಿರೋದೆಲ್ಲಾ ಶುದ್ಧ ಸುಳ್ಳು ಎಂದ SIT

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.25- ನಗರ ಪೊಲೀಸ್ ಆಯುಕ್ತರು ಹಾಗೂ ವಿಶೇಷ ತನಿಖಾ ದಳದ ಆಯುಕ್ತರ ಮೇಲೆ ಸಿಡಿ ಲೇಡಿ ಶಂಕೆ ವ್ಯಕ್ತಪಡಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಎರಡನೆ ಸಿಡಿ ಬಿಡುಗಡೆ ಮಾಡಿರುವ ಶಂಕಿತ ಯುವತಿ ಪೊಲೀಸರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಮಾ.12ರಂದು ಪೊಲೀಸ್ ಆಯುಕ್ತರಿಗೆ ನಾನು ಮಾತನಾಡಿರುವ ಸಿಡಿ ಕಳುಹಿಸಿದ್ದೆ. ಅದನ್ನು ರಮೇಶ್ ಜಾರಕಿಹೊಳಿ ನೋಡಿದ್ದಾರೆ.

ಮಾರನೆಯ ದಿನ ಪೊಲೀಸರಿಗೆ ತರಾತುರಿಯಲ್ಲಿ ದೂರು ನೀಡಿದ್ದಾರೆ ಎಂದು ಯುವತಿ ವೀಡಿಯೋದಲ್ಲಿ ಹೇಳಿದ್ದಾಳೆ. ಆದರೆ ಪೊಲೀಸರು ಯುವತಿಯ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಆಕೆ ಪೊಲೀಸರಿಗೆ ವೀಡಿಯೋ ಕಳುಹಿಸಿರಲಿಲ್ಲ. ನಾವು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೇವೆ. ನಮಗೆ ಯಾರನ್ನು ರಕ್ಷಣೆ ಮಾಡುವ ಉದ್ದೇಶ ಇಲ್ಲ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ಸೌಮೇಂದು ಮುಖರ್ಜಿ ಹೇಳಿದ್ದಾರೆ.

ಪೊಲೀಸರ ಮೇಲೆ ಮನಸ್ಸಿಗೆ ಬಂದಂತೆ ಆರೋಪ ಮಾಡುವುದು ಸರಿಯಲ್ಲ. ಆ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ 5 ಬಾರಿ ಇಮೇಲ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ನೋಟೀಸ್ ನೀಡಲಾಗಿದೆ. ಆದರೆ ಯಾವುದಕ್ಕೂ ಸ್ಪಂದಿಸಿಲ್ಲ. ಈಗ ಎರಡನೆ ವೀಡಿಯೋದಲ್ಲಿ ಪೊಲೀಸ್ ವ್ಯವಸ್ಥೆ ಮೇಲೆ ಶಂಕೆ ವ್ಯಕ್ತಪಡಿಸಿರುವುದು ಸರಿಯಲ್ಲ ಎಂದಿದ್ದಾರೆ.

ಪೊಲೀಸ್ ಅಧಿಕಾರಿಗಳ ಹೇಳಿಕೆಯ ಹೊರತಾಗಿಯೂ ಕೂಡ ಸಾರ್ವಜನಿಕ ವಲಯದಲ್ಲಿ ಯುವತಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯುವತಿ ಅಜ್ಞಾತ ಸ್ಥಳದಲ್ಲಿ ಕುಳಿತು ಮಾತನಾಡುವ ಬದಲಾಗಿ ನೇರವಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದರೆ ಪ್ರಕರಣವೇ ಇತ್ಯರ್ಥಗೊಳ್ಳುತ್ತದೆ. ಯಾವುದೇ ತಪ್ಪು ಮಾಡಿಲ್ಲ ಎಂಬ ದೃಢ ವಿಶ್ವಾಸ ಇರುವಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಂಜುತ್ತಿರುವುದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

Facebook Comments