ಸಿಡಿ ಪ್ರಕರಣದ ಮಾಸ್ಟರ್ ಮೈಂಡ್‍ಗಳ ಹಿಂದೆಬಿದ್ದ ಎಸ್‍ಐಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.15- ಸಿಡಿ ಮಾಸ್ಟರ್ ಮೈಂಡ್, ವಿಡಿಯೋದಲ್ಲಿರುವ ಯುವತಿ ಹಾಗೂ ಹ್ಯಾಕರ್ ಯಾವುದೇ ಕ್ಷಣದಲ್ಲಿ ಎಸ್‍ಐಟಿ ಪೊಲೀಸರ ಬಲೆಗೆ ಬೀಳುವ ಸಾಧ್ಯತೆಗಳಿವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಬೆನ್ನು ಬಿದ್ದಿರುವ ಎಸ್‍ಐಟಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಡಿ ಮಾಸ್ಟರ್ ಮೈಂಡ್, ವಿಡಿಯೋದಲ್ಲಿರುವ ಯುವತಿ ಹಾಗೂ ಹ್ಯಾಕರ್ ಮೂವರೂ ಒಟ್ಟಿಗೆ ಇರುವ ಬಗ್ಗೆ ಎಸ್‍ಐಟಿ ಪೊಲೀಸರಿಗೆ ಸುಳಿವು ದೊರೆತಿದ್ದು, ಆದಷ್ಟು ಶೀಘ್ರ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಡಿ ಬಯಲಾದ ನಂತರ ದೇವನಹಳ್ಳಿಯಿಂದ ಬಾಂಬೆ, ಬಾಂಬೆಯಿಂದ ತಿರುಪತಿಗೆ ತೆರಳಿದ್ದ ಆರೋಪಿಗಳು ಹೈದರಾಬಾದ್‍ನಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಸುಳಿವು ದೊರೆತಿದೆ.ಹೀಗಾಗಿ ಹೈದರಾಬಾದ್‍ಗೆ ತೆರಳಿರುವ ಎಸ್‍ಐಟಿ ಪೊಲೀಸರ ಒಂದು ತಂಡ ಆರೋಪಿಗಳನ್ನು ಪತ್ತೆಹಚ್ಚಿ ನಗರಕ್ಕೆ ಕರೆತರುವ ಸಾಧ್ಯತೆಗಳಿವೆ. ಯುವತಿ ಬಲೆಗೆ ಬಿದ್ದಿಲ್ಲ: ಸಿಡಿಯಲ್ಲಿ ಕಾಣಿಸಿಕೊಂಡ ಯುವತಿ ಇದುವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ ಎಂದು ಎಸ್‍ಐಟಿ ಮುಖ್ಯಸ್ಥ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

ಆರೋಪಿಗಳು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಸುಳಿವು ದೊರೆತಿದೆ. ಆದಷ್ಟು ಬೇಗ ಎಲ್ಲರನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುವತಿ, ಮಾಸ್ಟರ್ ಮೈಂಡ್ ಹಾಗೂ ಹ್ಯಾಕರ್ ಪತ್ತೆಗಾಗಿ ನಮ್ಮ ತಂಡಗಳು ಸತತ ಪ್ರಯತ್ನ ಮಾಡುತ್ತಿವೆ ಎಂದು ಅವರು ಈ ಸಂಜೆಗೆ ತಿಳಿಸಿದ್ದಾರೆ.

# ವಿಚಾರಣೆಗೆ ಗೈರು:
ಸಿಡಿ ಪ್ರಕರಣ ಕುರಿತಂತೆ ರಮೇಶ್ ಜಾರಕಿಹೊಳಿ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷಳಾದ ಯುವತಿ ಜಾರಕಿಹೊಳಿ ವಿರುದ್ಧವೇ ಆರೋಪ ಹೊರಿಸಿದ್ದಳು. ಈ ಘಟನೆ ನಂತರ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಯುವತಿಗೆ ಪೊಲೀಸರ ಮುಂದೆ ಖುದ್ದು ಹಾಜರಾಗಿ ದೂರು ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಯುವತಿಯ ಇ-ಮೇಲ್ ಐಡಿ, ವಾಟ್ಸ್‍ಆ್ಯಪ್‍ಗೆ ನೋಟಿಸ್ ರವಾನಿಸಿ, ವಿಜಯಪುರದಲ್ಲಿರುವ ಯುವತಿಯ ಅಜ್ಜನ ಮನೆ ಬಾಗಿಲಿಗೂ ನೋಟಿಸ್ ಅಂಟಿಸಲಾಗಿತ್ತು. ಮಾತ್ರವಲ್ಲ ಕಬ್ಬನ್‍ಪಾರ್ಕ್ ಠಾಣೆ ಇನ್ಸ್‍ಪೆಕ್ಟರ್ ಮೊಬೈಲ್ ನಂಬರ್ ನೀಡಿ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಇದ್ಯಾವುದಕ್ಕೂ ಕ್ಯಾರೆ ಅನ್ನದ ಯುವತಿ ಪೊಲೀಸರನ್ನು ಸಂಪರ್ಕಿಸುವುದಿರಲಿ ಯಾವುದೇ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾಳೆ.

# ಮುಂದುವರೆದ ವಿಚಾರಣೆ:
ಸಿಡಿ ಪ್ರಕರಣದಲ್ಲಿ ನಿನ್ನೆ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದ ಎಸ್‍ಐಟಿ ಪೊಲೀಸರು ಇಂದು ಮತ್ತೆ ಮೂವರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಕೆಲವರು ನೀಡಿರುವ ಮಾಹಿತಿಯನ್ನಾಧರಿಸಿ ತಲೆಮರೆಸಿಕೊಂಡಿರುವ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

# ಸಿಡಿ ಕೊಟ್ಟವನ ವಶ ಸಾಧ್ಯತೆ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸಿಡಿಯನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರಿಗೆ ನೀಡಿದ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ 25 ಲಕ್ಷ ರೂ. ಜಮಾವಣೆಯಾಗಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಹೀಗಾಗಿ ಕಲ್ಲಹಳ್ಳಿ ಅವರಿಗೆ ಸಿಡಿ ನೀಡಿದ ವ್ಯಕ್ತಿಯನ್ನು ಇಂದು ಎಸ್‍ಐಟಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

Facebook Comments