SIT ಮುಂದೆ ಸಿಡಿ ಯುವತಿಯ ಪೋಷಕರು ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.27- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದ್ದು, ಇಂದು ಸಿಡಿಯಲ್ಲಿದ್ದ ಯುವತಿಯ ಪೋಷಕರು ವಿಶೇಷ ತನಿಖಾ ದಳದ ಮುಂದೆ ಹಾಜರಾಗಿದ್ದಾರೆ.  ಮಾರ್ಚ್ 2ರಿಂದ ನಿರಂತರವಾಗಿ ಚರ್ಚೆಯಲ್ಲಿರುವ ಪ್ರಕರಣ ಏಟು ಎದಿರೇಟಿನ ರಾಜಕೀಯದ ಪಟ್ಟಾಗಿ ಬದಲಾಗಿದೆ.

ಅಜ್ಞಾತ ಸ್ಥಳದಲ್ಲಿರುವ ಯುವತಿ ಇಂದು ಮುಂಜಾನೆ ನಾಲ್ಕನೇ ವಿಡಿಯೋ ಬಿಡುಗಡೆ ಮಾಡಿ, ಎಸ್‍ಐಟಿ ಮುಂದೆ ನಾನು ಹಾಜರಾಗಿ ಹೇಳಿಕೆ ನೀಡುವ ವೇಳೆ ನನ್ನ ಅಪ್ಪ, ಅಮ್ಮ, ಅಜ್ಜಿ, ಇಬ್ಬರು ತಮ್ಮಂದಿರು ನನ್ನ ಕಣ್ಣೆದುರು ಇರಬೇಕು ಎಂದಿದ್ದಳು. ಅದಾದ ಕೆಲವೇ ಗಂಟೆಗಳಲ್ಲಿ ಯುವತಿಯ ತಂದೆ ತಾಯಿಯವರು ಬೆಂಗಳೂರಿನಲ್ಲಿರುವ ಮಡಿವಾಳ ಟೆಕ್ನಿಕಲ್ ಸೆಂಟರ್‍ಗೆ ಬಂದು ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ.

ಮಾರ್ಚ್ 2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ನಗರ ಪೋಲೀಸ್ ಆಯುಕ್ತರಿಗೆ ದೂರು ನೀಡಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಯುವತಿಗೆ ಲೈಂಗಿಕ ಕಿರುಕೂಳ ನೀಡಿದ್ದಾರೆ ಎಂದು ಆರೋಪಿಸಿದರು. ಅದರ ಬೆನ್ನಲ್ಲೆ ರಾಸಲೀಲೆಯ ಸಿಡಿ ಬಿಡುಗಡೆಯಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ನಂತರ ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದವು.

ಈ ನಡುವೆ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ರಮೇಶ್ ಜಾರಕಿಹೊಳಿ ಕೆಲಸಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅದನ್ನು ಮಾರ್ಚ್ 12ರಂದು ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ದಳಕ್ಕೆ ಕಳುಹಿಸಿದ್ದಾಗಿ ಹೇಳಿದ್ದಾರೆ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತ ಮಾಜಿ ಶಾಸಕ ನಾಗರಾಜ್ ಅವರ ಮೂಲಕ ಕಬ್ಬನ್‍ಪಾರ್ಕ್‍ಗೆ ದೂರು ನೀಡಿ ತಮ್ಮ ತೇಜೋವಧೆ ಮಾಡಲು ಸಂಚು ನಡೆದಿದೆ ಎಂದು ಆರೋಪಿಸಿದರು.

ಅದರ ತನಿಖೆ ಆರಂಭಿಸಿದ ಎಸ್‍ಐಟಿ ಸಿಡಿ ಸಂಚಿನ ಹಿಂದಿರುವವರ ತನಿಖೆಗೆ ಮುಂದಾಗಿತ್ತು. ಈ ನಡುವೆ ಯುವತಿಯ ಪೋಷಕರು ಬೆಳಗಾವಿಯ ಎಪಿಎಂಸಿ ಠಾಣೆಗೆ ದೂರು ನೀಡಿ ನಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೆ ಯುವತಿ ಮತ್ತೊಂದು ವಿಡಿಯೋ ಕಳುಹಿಸಿ ನನ್ನನ್ನು ಯಾರು ಅಪಹರಣ ಮಾಡಿಲ್ಲ, ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಳು.

ಮತ್ತೆ ಮೂರನೇ ವಿಡಿಯೋ ಬಿಡುಗಡೆ ಮಾಡಿ ರಮೇಶ್ ಜಾರಕಿಹೊಳಿ ವಿರುದ್ದ ನೇರ ಆರೋಪ ಮಾಡಿ ಅವರ ವಿರುದ್ಧ ನನಗೆ ಪರಿಚಿತರಾಗಿರುವ ವಕೀಲ ಜಗದೀಶ್ ಅವರ ಮೂಲಕ ದೂರು ಕೊಡುತ್ತಿರುವುದಾಗಿ ಹೇಳಿದರು. ಅದರಂತೆ ನಿನ್ನೆ ಹಸ್ತಾಕ್ಷರದಲ್ಲಿರುವ ದೂರನ್ನು ನಿನ್ನೆ ವಕೀಲ ಜಗದೀಶ್ ನಿನ್ನೆ ಮಧ್ಯಾಹ್ನ ನಗರ ಪೋಲೀಸ್ ಆಯುಕ್ತರಿಗೆ ನೀಡಿದ್ದರು. ಅದನ್ನು ಆಧರಿಸಿ ಕಬ್ಬನ್‍ಪಾಕ್  ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೆಯ ವೇಳೆಗೆ ಆಡಿಯೋವೊಂದು ಬಿಡುಗಡೆಯಾಗಿದ್ದು ಅದರಲ್ಲಿ ಯುವತಿ ತಮ್ಮ ಮನೆಯವರ ಬಳಿ ಮಾತನಾಡುತ್ತಾ ಸಿಡಿಯಲ್ಲಿರುವುದು ನಾನಲ್ಲ. ಅದಲ್ಲಾ ಸುಳ್ಳು ಎಂದಿದ್ದಳು. ಈ ಬಗ್ಗೆ ಮಾತನಾಡಲು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಳು. ಅದನ್ನೇ ಮುಂದಿಟ್ಟುಕೊಂಡು ಮತ್ತಷ್ಟು ರಾಜಕೀಯ ಬೆಳವಣಿಗೆಗಳು ನಡೆದಿದ್ದವು.

ಆಡಿಯೋದಲ್ಲಿ ಮಾತನಾಡಿರುವ ಯುವತಿ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಆಡಿಯೋದಲ್ಲಿರುವ ಧ್ವನಿ ಮತ್ತು ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಧ್ವನಿ ಒಂದೇ ಆಗಿದ್ದರೆ ಪ್ರಕರಣವೇ ಇತ್ಯರ್ಥವಾದಂತಾಗುತ್ತದೆ ಎಂದು ರಮೇಶ್ ಜಾರಕಿಹೊಳಿ ಅವರ ಸಹೋದರರೂ ಆಗಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಇಂದು ಮುಂಜಾನೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಯುವತಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿರುವುದಕ್ಕೆ ಸ್ಪಷ್ಟನೆ ನೀಡಿದ್ದರು. ಜೊತೆಗೆ ತಮ್ಮ ತಂದೆ ತಾಯಿಯನ್ನು ಬೆಂಗಳೂರಿಗೆ ಕರೆ ತರಬೇಕು, ನಾನು ಎಸ್‍ಐಟಿ ಮುಂದೆ ಹೇಳಿಕೆ ನೀಡುವಾಗ ನನ್ನ ಕುಟುಂಬದ ಸದಸ್ಯರು ನನ್ನ ಕಣ್ಣ ಮುಂದೆ ಇರಬೇಕು ಎಂದಿದ್ದಳು.
ವಿಡಿಯೋ ಹೊರ ಬಿದ್ದ ನಂತರ ಯುವತಿಯ ತಂದೆ ತಾಯಿಯವರು ಇಂದು ಎಸ್‍ಐಟಿ ಮುಂದೆ ಹಾಜರಾಗಿದ್ದಾರೆ.

Facebook Comments