ಕಾಶ್ಮೀರ ಗಡಿಯಲ್ಲಿ ಭಾರತ -ಪಾಕ್ ಯೋಧರ ಗನ್‍ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ/ ಜಮ್ಮು, ನ.22- ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಬಾಲ ಬಿಚ್ಚಿರುವ ಪಾಕಿಸ್ತಾನಿ ಸೇನಾ ಪಡೆಗಳಿಗೆ ಭಾರತೀಯ ಯೋಧರು ಪರಿಣಾಮಕಾರಿಯಾಗಿ ಬಿಸಿ ಮುಟ್ಟಿಸಿದ್ದಾರೆ. ಕಾಶ್ಮೀರ ಕಣಿವೆಯ ಕತುವಾ ಜಿಲ್ಲೆಯಲ್ಲಿ ಕದನ ವಿರಾಮ ಒಪ್ಪಂದಗಳನ್ನು ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದ ಪಾಕ್ ರೇಂಜರ್‍ಗಳಿಗೆ ಭಾರತ ಗಡಿ ಭದ್ರತಾ ಪಡೆಯ ಯೋಧರು ಸಮರ್ಥ ಪ್ರತ್ಯುತ್ತರ ನೀಡಿದ್ದಾರೆ.

ಕತ್ಹುವಾ ಜಿಲ್ಲೆಯ ಹೀರಾ ನಗರ್ ವಲಯದ ಸತ್ಪಲ್, ಮನ್ಯರಿ, ಕರೋಲ್ ಕೃಷ್ಣಾ ಮತ್ತು ಗುರು ನಾಮ್ ಪ್ರದೇಶಗಳಲ್ಲಿನ ಸೇನಾ ನೆಲೆಗಳು ಮತ್ತು ಗಡಿ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ನಿನ್ನೆ ರಾತ್ರಿ 9 ಗಂಟೆಗೆ ಪಾಕ್ ಸೇನೆ ದಾಳಿ ನಡೆಸಿತು. ತಕ್ಷಣ ಕಾರ್ಯ ಪ್ರವೃತ್ತರಾದ ಭಾರತೀಯ ಯೋಧರು ಪ್ರತಿ ದಾಳಿ ನಡೆಸಿದಾಗ ಉಭಯ ಸೇನಾ ಪಡೆಗಳ ನಡುವೆ ಕೆಲ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು ಎಂದು ರಕ್ಷಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಭಾರತೀಯ ಸೇನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರ ಕಣಿವೆಯ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನಿ ಸೇನಾ ಪಡೆ ಯುದ್ಧ ವಿರಾಮ ಒಡಂಬಡಿಕೆಗಳನ್ನು ಉಲ್ಲಂಘಿಸಿ ಅಪ್ರೇರಿತ ಗುಂಡಿನ ದಾಳಿಗಳನ್ನು ನಡೆಸುತ್ತಿದ್ದು , ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ.
ಈ ವರ್ಷ ಪಾಕಿಸ್ತಾನ ಸೇನೆ 4,300ಕ್ಕೂ ಹೆಚ್ಚು ಯುದ್ಧ ವಿರಾಮಗಳನ್ನು ಉಲ್ಲಂಘಿಸಿ ದಿಟ್ಟ ಪ್ರತ್ಯುತ್ತರ ಪ್ರದರ್ಶಿಸಿದೆ.

Facebook Comments