ಅವಿಸ್ಮರಣೀಯ ಸಂಭ್ರಮಕ್ಕೆ ಸಾಕ್ಷಿಯಾದ ರಾಮ ಜನ್ಮ ಭೂಮಿ ಅಯೋಧ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಅಯೋಧ್ಯೆ,ಆ.5- ಹಿಂದೂಗಳ ಆರಾಧ್ಯ ದೈವ, ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿಂದು ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಹಿನ್ನೆಲೆ ಹುಟ್ಟೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇಡೀ ಅಯೋಧ್ಯೆ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಳಿಸಲಾಗಿತ್ತು. ಕಳೆದೆರಡು ದಿನಗಳಿಂದ ಎಲ್ಲಿ ನೋಡಿದರೂ ದೀಪಾವಳಿ ಹಬ್ಬದ ವಾತಾವರಣವಿತ್ತು. ಪ್ರತಿಯೊಂದು ಮನೆಗಳು, ಬೀದಿಗಳು ತಳೀರುತೋರಣಗಳಿಂದ ಕಂಗೊಳಿಸುತ್ತಿದ್ದವು.

ಭವ್ಯ ರಾಮ ಮಂದಿರದ ಭೂಮಿ ಪೂಜೆಗೆ ರಾಮ ಜನ್ಮಭೂಮಿ ಅಯೋಧ್ಯೆ ಸಿಂಗಾರಗೊಂಡಿದ್ದು, ಇಡೀ ನಗರ ಕೇಸರಿಮಯಗೊಂಡಿದೆ. ನಗರದ ಪ್ರಮುಖ ಬೀದಿಗಳು ಹಾಗೂ ಬಹುತೇಕ ಕಟ್ಟಡಗಳು ಕೇಸರಿ ಬಣ್ಣದಲ್ಲಿ ಮಿಂದೆದ್ದಿವೆ.

ರಾಮ ಮಂದಿರ ಭೂಮಿ ಪೂಜೆಗೆ ಸಿಂಗಾರಗೊಂಡಿರುವ ಅಯೋಧ್ಯೆಯ ಬೀದಿ ಬೀದಿಯೂ ಸಂಪೂರ್ಣ ಕೇಸರಿಮರಿಯವಾಗಿತ್ತು. ನಗರದ ಪ್ರಮುಖ ರಸ್ತೆಗಳು ಹಾಗೂ ಕಟ್ಟಡಗಳನ್ನು ಕೇಸರಿ ಬಣ್ಣದಲ್ಲಿ ಕಂಗೊಳಿಸುವಂತೆ ಮಾಡಲಾಗಿದೆ.

ಅಯೋಧ್ಯೆ ಜನತೆಯೂ ಸಡಗರ, ಸಂಭ್ರಮದಿಂದ ತಮ್ಮ ತಮ್ಮ ಮನೆಗಳನ್ನು ಸಿಂಗರಿಸಿ ಶ್ರೀರಾಮನ ಪೂಜೆ ನೆರವೇರಿಸಿದರು. ನಗರದ ಬಹುತೇಕ ಕಟ್ಟಡಗಳು ಕೇಸರಿ ಬಣ್ಣದಲ್ಲಿ ಮಿಂದೆದ್ದಿದ್ದು, ಕಡ್ಡಗಳ ಮೇಲೆ ದೇವಾನು ದೇವತೆಗಳ ವರ್ಣಚಿತ್ರ ಬಿಡಿಸಲಾಗಿದೆ.

ಪ್ರಮುಖವಾಗಿ ಶ್ರೀರಾಮ, ಹನುಮಂತ , ಶಿವ, ಗಣೇಶ ಸೇರಿದಂತೆ ಪ್ರಮುಖ ದೇವಾನುದೇವತೆಗಳು ಎಲ್ಲಾ ಕಟ್ಟಡಗಳ ಮೇಲೆ ರಾರಾಜಿಸುತ್ತಿದ್ದವು.  ಅಯೋಧ್ಯೆ ನಗರ ತಳಿರು ತೋರಣ, ಬಣ್ಣದ ಚಿತ್ರಗಳಿಂದ ಸಿಂಗಾರಗೊಂಡಿದೆ.

ರಾಮಾಯಣದ ದೃಶ್ಯಗಳನ್ನು ಅಯೋಧ್ಯೆಯ ಕಾಂಪೌಂಡ್ ಗೋಡೆಗಳಿಗೆ ಬಣ್ಣದ ಮೂಲಕ ಚಿತ್ರಿಸಲಾಗಿದೆ. ರಸ್ತೆಗಳಿಗೆ ಡಾಂಬರು ಹಾಕಿ ನಳನಳಿಸುವಂತೆ ಮಾಡಲಾಗಿದೆ.

ಒಂದೆಡೆ ರಾಮಲಲ್ಲಾ ಮಂದಿರ ನಿರ್ಮಾಣದ ಸಿದ್ಧತೆ ನಡೆಯುತ್ತಿದ್ದರೆ ಮತ್ತೊಂದೆಡೆ ಅಯೋಧ್ಯೆ ಹೊರಭಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಜಿಲ್ಲಾಡಳಿತ ಐದು ಎಕರೆ ಜಾಗವನ್ನು ಮಂಜೂರು ಮಾಡಿದೆ. ಜಿಲ್ಲಾಧಿಕಾರಿ ಮಸೀದಿಗೆ ಭೂಮಿ ನೀಡಿ ಆದೇಶ ಹೊರಡಿಸಿದ್ದರು.

Facebook Comments

Sri Raghav

Admin