ಬೆಂಗಳೂರು ಸ್ಥಿತಿ ಭಯಾನಕ, ಚಿತಾಗಾರ-ಸ್ಮಶಾನಗಳ ಮುಂದೆ ಗಂಟೆಗಟ್ಟಲೆ ಕ್ಯೂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.30- ರಾಜಧಾನಿ ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ರಶ್… ಎಲ್ಲ ಚಿತಾಗಾರ, ಸ್ಮಶಾನಗಳ ಮುಂದೆ ಸಾಲು ಸಾಲು ಆ್ಯಂಬುಲೆನ್ಸ್‍ಗಳು… ಪಾರ್ಥಿವ ಶರೀರಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟವರು ಮತ್ತು ಇನ್ನಿತರ ಕಾಯಿಲೆಗಳಿಂದ ಮೃತಪಟ್ಟವರು ಅಲ್ಲದೆ ಸಹಜವಾಗಿ ಸಾವನ್ನಪ್ಪಿದವರು ಈಗ ಅಂತ್ಯಸಂಸ್ಕಾರ ನೆರವೇರಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹರಿಶ್ಚಂದ್ರಘಾಟ್, ಸುಮ್ಮನಹಳ್ಳಿ, ಚಾಮರಾಜಪೇಟೆ, ವಿಲ್ಸನ್ ಗಾರ್ಡನ್ ಸೇರಿದಂತೆ 12 ಚಿತಾಗಾರಗಳ ಬಳಿ ಅಂತ್ಯ ಸಂಸ್ಕಾರ ನೆರವೇರಿಸಲು ಮೃತದೇಹಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.

ಅನ್ಯ ಕಾಯಿಲೆಯಿಂದ ಮೃತಪಟ್ಟರೆ ಕೋವಿಡ್ ಪರೀಕ್ಷೆ ಮಾಡಬೇಕು. ಅದಕ್ಕಾಗಿ ಒಂದೆರಡು ದಿನ ಕಾಯಬೇಕು. ವರದಿ ಬಂದ ಮೇಲೆ ಸಂಸ್ಕಾರ ಮಾಡಲು ಚಿತಾಗಾರಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

ಯಾವ ಆಸ್ಪತ್ರೆಗಳಿಗೆ ಹೋದರೂ ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಲು ಬೆಡ್ ಇಲ್ಲ ಎಂದು ಹೇಳಲಾಗುತ್ತಿದೆ. ಅದೇ ರೀತಿ ಯಾವ ಸ್ಮಶಾನಕ್ಕೆ ಹೋದರೂ ಅಂತ್ಯ ಸಂಸ್ಕಾರ ಮಾಡಲು ಸದ್ಯ ಅವಕಾಶವಿಲ್ಲ, ಕಾಯಬೇಕು ಎಂದು ಹೇಳುತ್ತಾರೆ.

ಗಂಟೆಗಟ್ಟಲೆ, ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಚಿತಾಗಾರದಲ್ಲಿ ಅವಕಾಶವಿಲ್ಲದಿದ್ದರೆ ಮತ್ತೊಂದು ಚಿತಾಗಾರ, ಇನ್ನೊಂದು ಚಿತಾಗಾರವನ್ನು ಹುಡುಕಿಕೊಂಡು ಅಲೆದಾಡಬೇಕು.

ಕೋವಿಡ್-19 ಮೃತದೇಹವಾದರೆ ಅಂತ್ಯಸಂಸ್ಕಾರ ಒಂದು ರೀತಿಯಾಗುತ್ತದೆ. ಇನ್ನಿತರ ಮೃತದೇಹಗಳ ಅಂತ್ಯಸಂಸ್ಕಾರದ ಫಜೀತಿ ಹೇಳತೀರದಾಗಿದೆ.  ಈಗಾಗಲೇ ಬೆಂಗಳೂರು ನಗರದಲ್ಲಿ ಅರ್ಧ ಲಕ್ಷದಷ್ಟು ಕೊರೊನಾ ಸೋಂಕಿತರಿದ್ದಾರೆ.

ದಿನಕ್ಕೆ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ನೂರಕ್ಕೆ ಏರಿಕೆಯಾಗುತ್ತಿದೆ. ಈಗಲೇ ಸ್ಮಶಾನಗಳಲ್ಲಿ ಜಾಗವಿಲ್ಲ. ಇನ್ನು ಮುಂದೆ ಹೇಗೆ ಎಂಬ ಆತಂಕ ಎದುರಾಗಿದೆ.

Facebook Comments

Sri Raghav

Admin