ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಭೇಟಿ, ವಿಸ್ತೃತ ವರದಿ ನೀಡಿದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕರ್ನಾಟಕವನ್ನೇ ಬೆಚ್ಚಿ ಬೀಳಿಸಿರುವ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು, ಸಾವಿನ ಸಂಖ್ಯೆ, ಸರ್ಕಾರ ಕೈಗೊಂಡಿರುವ ತುರ್ತು ಕ್ರಮಗಳು ಸೇರಿದಂತೆ ಕೊರೊನಾ ಬೆಳವಣಿಗೆಗಳ ಮಾಹಿತಿಯ ವರದಿಯನ್ನು ರಾಜ್ಯ ಸರ್ಕಾರ ಇಂದು ಕೇಂದ್ರಕ್ಕೆ ಸಲ್ಲಿಸಿದೆ.

ಕೇಂದ್ರದ ಇಎಂಆರ್ ನಿರ್ದೇಶಕ ಪಿ.ರವೀಂದ್ರನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅರ್ತಿ ಅಹುಜ ನೇತೃತ್ವದ ಎಂಟು ಮಂದಿ ಹಿರಿಯ ಅಧಿಕಾರಿಗಳ ಅಧ್ಯಯನ ತಂಡ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಪುಟದ ಸಹುದ್ಯೋಗಿಗಳು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು.

ರಾಜ್ಯದಲ್ಲಿ ಕೊರೊನಾ ಸೋಂಕು ಅಧಿಕೃತವಾಗಿ ಪ್ರವೇಶವಾದ ನಂತರ ಅಂದಿನಿಂದ ಸೋಮವಾರ ಸಂಜೆವರೆಗೂ ಒಟ್ಟು ಸೋಂಕಿತ ಪ್ರಕರಣಗಳು, ಇದರಿಂದ ಸಂಭವಿಸಿರುವ ಸಾವು, ಒಟ್ಟು ಕಂಟೈನ್ಮೆಂಟ್ ವಲಯಗಳು, ಹಸಿರು ವಲಯಗಳು, ಲಾಕ್‍ಡೌನ್‍ಗೂ ಮುನ್ನ ಇದ್ದ ಸೋಂಕಿನ ಪ್ರಮಾಣ, ಅನ್‍ಲಾಕ್ ನಂತರ ಹಬ್ಬಿರುವ ಪ್ರಕರಣಗಳು, ಸರ್ಕಾರ ಯಾವ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತಂತೆ ವಿಸ್ತೃತ ವರದಿಯನ್ನು ಸಲ್ಲಿಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ , ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಎಸ್.ಸುರೇಶ್‍ಕುಮಾರ್, ಡಾ.ಕೆ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಂಪೂರ್ಣ ಮಾಹಿತಿಯ ವರದಿಯನ್ನು ಕೇಂದ್ರದ ವಿಶೇಷ ತಂಡಕ್ಕೆ ಹಸ್ತಾಂತರಿಸಿದರು.

ಎಂಟು ಮಂದಿ ನೇತೃತ್ವದ ಹಿರಿಯ ಅಧಿಕಾರಿಗಳ ಅಧ್ಯಯನ ತಂಡ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು,ಕಂಟೈನ್ಮೆಂಟ್ ವಲಯ, ಹಸಿರು ವಲಯಗಳಿಗೂ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಲಿದೆ. ಕರ್ನಾಟಕ ಸರ್ಕಾರ ನೀಡಿರುವ ವರದಿ ಜೊತೆಗೆ ಈ ಅಧಿಕಾರಿಗಳು ಮತ್ತೊಂದು ಪ್ರತ್ಯೇಕವಾದ ವರದಿಯನ್ನು ಸಿದ್ದಪಡಿಸಿ ಕೇಂದ್ರ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಲಿದ್ದಾರೆ.

ಹೊರಗಿನಿಂದ ಬಂದವರಿಂದಲೇ ಹೆಚ್ಚು ಸೋಂಕು:  ಇನ್ನು ರಾಜ್ಯ ಸರ್ಕಾರ ಕೇಂದ್ರ ಅಧ್ಯಯನ ತಂಡಕ್ಕೆ ನೀಡಿರುವ ವರದಿಯಲ್ಲಿ ಸೋಂಕು ಪ್ರಮಾಣ ಹೆಚ್ಚಾಗಲು ಕಾರಣವೇನು ಎಂಬ ಅಂಶವನ್ನು ಉಲ್ಲೇಖ ಮಾಡಿದೆ.  ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಲ್ಲಿ ಇರುವವರೆಗೂ ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣ ಸಹಜಸ್ಥಿತಿಯಲ್ಲಿತ್ತು. ಅಂದು ಸರ್ಕಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಎಲ್ಲ ಚಟುವಟಿಕೆಗಳಿಗೂ ನಿರ್ಬಂಧ ಹಾಕಿತ್ತು.

ಅಂತರ್‍ಜಿಲ್ಲಾ ಪ್ರವಾಸ, ಹೊರರಾಜ್ಯದವರಿಗೆ ತಡೆ, ಗಡಿಭಾಗಗಳಲ್ಲಿ ಬಿಗಿಯಾದ ತಪಾಸಣೆ, ಚೆಕ್‍ಪೋಸ್ಟ್‍ಗಳ ಹೆಚ್ಚಳ, ಹಳ್ಳಿಯಿಂದ ನಗರದವರೆಗೆ ಜನಜಾಗೃತಿ, ಹಸಿರುವಲಯ ಬಿಟ್ಟು ಉಳಿದ ಕಡೆ ಸಂಪೂರ್ಣ ನಿರ್ಬಂಧ ಹಾಕಲಾಗಿತ್ತು.

ಪರಿಣಾಮ ಕರ್ನಾಟಕ ಕೊರೊನಾ ಪೀಡಿತ ರಾಜ್ಯಗಳ ಪೈಕಿ 13ನೇ ಸ್ಥಾನ ಪಡೆದುಕೊಂಡಿತ್ತು. ಯಾವಾಗ ಲಾಕ್‍ಡೌನ್ ಸಡಿಲಗೊಳಿಸಿ ಕೆಲವು ನಿರ್ಬಂಧಗಳೊಂದಿಗೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಯಿತೋ ಆಗ ಸೋಂಕು ಹೆಚ್ಚು ಪ್ರಮಾಣದಲ್ಲಿ ಹಬ್ಬಿಕೊಂಡಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ವಿಶೇಷವಾಗಿ ಅತಿಹೆಚ್ಚು ಸೋಂಕು ಬಾಧಿತ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ ಮತ್ತಿತರ ಭಾಗಗಳಿಂದ ಜನರು ಯಥೇಚ್ಚವಾಗಿ ಆಗಮಿಸಿದರು. ಹೀಗಾಗಿ ಹೊರರಾಜ್ಯಗಳಿಂದ ಬಂದವರಿಂದಲೇ ಕೊರೊನಾ ಪ್ರಮಾಣ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

ಈಗ ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಸೋಂಕು ಹಬ್ಬುವುದನ್ನು ತಡೆಗಟ್ಟಲು ಸರ್ಕಾರ ವಿಶೇಷವಾದ ತುರ್ತು ಕ್ರಮಗಳನ್ನು ಕೈಗೊಂಡಿದೆ. ಇದರ ಮೊದಲ ಹಂತವಾಗಿ ಜುಲೈ ತಿಂಗಳು ಸಂಪೂರ್ಣವಾಗಿ ಭಾನುವಾರ ಲಾಕ್‍ಡೌನ್ ಜಾರಿ ಮಾಡಲಾಗಿದೆ.

ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಯಾವ ವ್ಯಕ್ತಿ ಮಾಸ್ಕ್ ಧರಿಸುವುದಿಲ್ಲವೋ ಅಂಥವರಿಗೆ 200 ರೂ. ದಂಡ, ಕಾನೂನು ಉಲ್ಲಂಘಿಸುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಹತ್ತುಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಕೇಂದ್ರಕ್ಕೆ ಕಳುಹಿಸಿರುವ ಮಾಹಿತಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ ನೈಸ್ ರಸ್ತೆ ಪಕ್ಕವಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆ ಸಾಮಥ್ರ್ಯವುಳ್ಳ ಕೋವಿಡ್ ಆಸ್ಪತ್ರೆ, ಕಂಠೀರವ ಕ್ರೀಡಾಂಗಣ ಬಳಕೆ, ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಖಾಸಗಿ ಆಸ್ಪತ್ರೆಯವರು 7000 ಹಾಸಿಗೆ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ.

ನಗರದಲ್ಲಿ ಯಾವ ಯಾವ ಕಡೆ ಸೋಂಕಿನ ಪ್ರಮಾಣಗಳು ಹೆಚ್ಚಾಗಿವೆಯೋ ಅದನ್ನು ಸೀಲ್‍ಡೌನ್ ಮಾಡಲಾಗಿದೆ. ಜೊತೆಗೆ ಪ್ರತಿ ವಾರ್ಡ್‍ನಲ್ಲೂ ಎನ್‍ಜಿಒಗಳು, ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಮಿತಿ ರಚನೆ, ಆ್ಯಂಬುಲೆನ್ಸ್ ಖರೀದಿ ಸೇರಿದಂತೆ ಕೊರೊನಾ ನಿಯಂತ್ರಿಸಲು ಹಲವಾರು ಕ್ರಮಗಳನ್ನುಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಎಲ್ಲಿಯೂ ವಿಫಲವಾಗಿಲ್ಲ. ಸಚಿವರು ಮತ್ತು ಅಧಿಕಾರಿಗಳ ತಂಡ ಅಹೋರಾತ್ರಿ ಕೆಲಸ ಮಾಡುತ್ತಿದೆ. ಹೊರಗಿನಿಂದ ಬಂದವರಿಂದ ಸೋಂಕು ಹೆಚ್ಚಾಗಿದೆ. ಅದೃಷ್ಟವಶಾತ್ ಈವರೆಗೂ ಸೋಂಕು ಸಮುದಾಯಕ್ಕೆ ಹಬ್ಬಿಲ್ಲ.

ಕರ್ನಾಟಕ ಕೊರೊನಾ ನಿಯಂತ್ರಣಕ್ಕಾಗಿ ದೇಶದಲ್ಲೇ ಮೊದಲ ಬಾರಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಕೇಂದ್ರ ಸರ್ಕಾರವೂ ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು. ಈಗಲೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಸಾವಿನ ಪ್ರಮಾಣ ತಗ್ಗಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸರ್ಕಾರ ಹೇಳಿದೆ.

Facebook Comments