ಬಿಗ್ ಬ್ರೇಕಿಂಗ್ : ದಿನಸಿ, ತರಕಾರಿ ವ್ಯಾಪಾರಿಗಳಿಗೆ ಕೊರೋನಾ ಟೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.8- ದಿನಸಿ, ತರಕಾರಿ ಮತ್ತಿತರ ದಿನನಿತ್ಯದ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ವರ್ತಕರಿಂದಲೇ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತೀವ್ರ ಆತಂಕ ವ್ಯಕ್ತಪಡಿಸಿದೆ.

ಸಾಂಕ್ರಾಮಿಕ ರೋಗ ಉಲ್ಭಣ ಮತ್ತು ಸಾವಿನ ಹೆಚ್ಚಳ ಪ್ರಮಾಣವನ್ನು ತಡೆಗಟ್ಟಲು ಇಂಥ ಮಂದಿಯಲ್ಲಿ ಆರಂಭದಲ್ಲೇ ಸೋಂಕು ಪತ್ತೆ ತಕ್ಷಣ ಪರೀಕ್ಷೆ ನಡೆಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಆತಂಕಕಾರಿ ಮಟ್ಟದಲ್ಲಿ ಸೋಟಗೊಂಡು ರೋಗಿಗಳು ಮತ್ತು ಸಾವು ಪ್ರಕರಣಗಳು ತೀವ್ರ ಹೆಚ್ಚಾಗುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಕೈಗಾರಿಕಾ ಪ್ರದೇಶಗಳಲ್ಲಿ ಮುಚ್ಚಿದ ಸ್ಥಳಗಳಲ್ಲಿ ನಡೆಯುವ ಕೆಲಸದ ಸ್ಥಳಗಳು ಸೋಂಕು ಹಬ್ಬುವ ಹಾಟ್‍ಸ್ಪಾಟ್‍ಗಳು. ಅದೇ ರೀತಿ ಜನಸಂದಣಿ ಹೆಚ್ಚಾಗಿರುವ ಮಾರುಕಟ್ಟೆಗಳು, ಕೊಳಗೇರಿಗಳು, ವೃದ್ಧಾಶ್ರಮಗಳು, ಕಾರಾಗೃಹಗಳು ಇತ್ಯಾದಿ ಸ್ಥಳಗಳಲ್ಲಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಾಗಿದ್ದು, ಈ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಿದೆ.

ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ಸೋಂಕು ರೋಗ ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಸಾಮಥ್ರ್ಯವನ್ನು ಹೆಚ್ಚಿಸಬೇಕೆಂದು ಸೂಚಿಸಿದ್ದಾರೆ.

ಆಮ್ಲಜನಕ ಸೌಲಭ್ಯ ಮತ್ತು ಕ್ಷಿಪ್ರ ಸ್ಪಂದನೆ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಣಾ ಅಂಬ್ಯುಲೆನ್ಸ್ ಸಾರಿಗೆ ವ್ಯವಸ್ಥೆಯ ಅಗತ್ಯವನ್ನೂ ಸಹ ರಾಜೇಶ್ ಭೂಷಣ್ ಸುತ್ತೋಲೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.
ಕೆಲವು ರಾಜ್ಯಗಳಲ್ಲಿ ಅಂಬ್ಯುಲೆನ್ಸ್ ಕೊರತೆ ಇರುವುದು ಕಂಡು ಬಂದಿದೆ.

ಆಂಬ್ಯುಲೆನ್ಸ್ ಅಲಭ್ಯತೆ ಮತ್ತು ನಿರಾಕರಣೆ ಪ್ರಕರಣಗಳ ಪ್ರತಿದಿನ ನಿಗಾ ವಹಿಸಬೇಕು. ಈ ಸಮಸ್ಯೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸಬೇಕೆಂದು ಆರೋಗ್ಯ ಸಚಿವಾಲಯ ಸೂಚಿಸಿದೆ.

ದೇಶದಲ್ಲಿ ಹೊಸ ಪ್ರದೇಶಗಳು ಮತ್ತು ಸೋಂಕು ಇಲ್ಲದ ಸ್ಥಳಗಳಿಗೂ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹಬ್ಬುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಭೂಷಣ್, ಇಂಥ ಸ್ಥಳಗಳಲ್ಲಿ ಪಿಡುಗು ವಿಸ್ತರಣೆಯಾಗುವುದನ್ನು ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದ್ದಾರೆ.

ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುವುದನ್ನು ಮೊದಲು ನಿಯಂತ್ರಿಸಬೇಕು. ಇದೇ ವೇಳೆ ಜನರ ಜೀವವನ್ನು ಉಳಿಸಲು ಶತಾಯಗತಾಯ ಶ್ರಮ ವಹಿಸಬೇಕೆಂದು ಅವರು ಸೂಚಿಸಿದ್ದಾರೆ.

ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಾವು ಈವರೆಗೆ ಈ ಸಂಬಂಧ ಉತ್ತಮ ಕ್ರಮಗಳನ್ನು ಕೈಗೊಂಡಿದ್ದೇವೆ. ಸೋಂಕು ಪ್ರಕರಣಗಳನ್ನು ನಿಯಂತ್ರಿಸಿ ಮರಣ ಪ್ರಮಾಣವನ್ನು ತಪ್ಪಿಸುವುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಕ್ಷಿಪ್ರ ಪರೀಕ್ಷೆ , ಸೂಕ್ತ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ , ಸೋಂಕು ಪತ್ತೆಯಾದ ತಕ್ಷಣ ಆರೋಗ್ಯ ಆರೈಕೆ ಕೇಂದ್ರಗಳಿಗೆ ರೋಗಿಗಳ ಸೇರ್ಪಡೆ, ಹಾಗೂ ಸೂಕ್ತ ಚಿಕಿತ್ಸಾ ಕ್ರಮಗಳು ಸಾವು ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಸಂಗತಿಗಳಾಗಿವೆ ಎಂದು ಅವರು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.

ಪರಿಸ್ಥಿತಿಯನ್ನು ಅವಲಂಬಿಸಿ ಮನೆಯಿಂದ ಮನೆಗೆ ಸಮೀಕ್ಷೆ ಮತ್ತು ರೋಗ ತಪಾಸಣೆ ವ್ಯವಸ್ಥೆ ಮಾಡಲು ಸಹ ಕ್ರಮ ಕೈಗೊಳ್ಳುವಂತೆಯೂ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದೆ.

Facebook Comments

Sri Raghav

Admin