ಮೆಟ್ರೊ ಸಿಬ್ಬಂದಿ ವಿರುದ್ಧ ಎಸ್ಮಾ ಅಸ್ತ್ರ ಪ್ರಯೋಗಕ್ಕೆ ಮುಂದಾದ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Namma-Metro
ಬೆಂಗಳೂರು, ಮೇ 31-ಪದೇ ಪದೇ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ನಮ್ಮ ಮೆಟ್ರೊ ಸಿಬ್ಬಂದಿಯ ಆಟಾಟೋಪಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಮಹಾನಗರಗಳಲ್ಲಿ ಮೆಟ್ರೊ ಸಿಬ್ಬಂದಿಗೆ ಏಕರೂಪದ ನಿಯಮವನ್ನು ಜಾರಿ ಮಾಡಲು ಮುಂದಾಗಿರುವ ಕೇಂದ್ರವು ಇನ್ನು ಮುಂದೆ ಮೆಟ್ರೊ ರೈಲು ಸಿಬ್ಬಂದಿಯನ್ನು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ)ವ್ಯಾಪ್ತಿಗೆ ಒಳಪಡಿಸಲು ತೀರ್ಮಾನಿಸಿದೆ.

ಈ ಸಂಬಂಧ 1981ರ ಸೆಕ್ಷನ್ (2) (1) (ಎ) ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಇನ್ನು ಮುಂದೆ ದೇಶದ ಎಲ್ಲ ಮೆಟ್ರೋ ರೈಲು ಸಿಬ್ಬಂದಿ ಎಸ್ಮಾ ವ್ಯಾಪ್ತಿಗೆ ಒಳಪಡಲಿದ್ದಾರೆ.   ಎಸ್ಮಾ ಕಾಯ್ದೆಗೆ ಒಳಪಟ್ಟರೆ ಸರ್ಕಾರಿ, ಖಾಸಗಿ, ಅರೆಸರ್ಕಾರಿ ಸೇರಿದಂತೆ ಯಾವುದೇ ಸಿಬ್ಬಂದಿಯು ಸರ್ಕಾರದ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ, ಮುಷ್ಕರ, ಧರಣಿ ನಡೆಸುವಂತಿಲ್ಲ.

ಸಾರ್ವಜನಿಕರ ಸೇವೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶ ಸರ್ಕಾರಕ್ಕಿರುತ್ತದೆ. ಈಗಾಗಲೇ ಕರ್ನಾಟಕ ಸರ್ಕಾರ 2013ರಲ್ಲೇ ನಮ್ಮ ಮೆಟ್ರೊ ರೈಲು ಸಿಬ್ಬಂದಿಯನ್ನು ಎಸ್ಮಾ ವ್ಯಾಪ್ತಿಗೆ ಒಳಪಡಿಸುವುದಾಗಿ ತಿಳಿಸಿತ್ತು. ಆದರೆ ಇದು ಅಧಿಕೃತವಾಗಿರಲಿಲ್ಲ. ಇದೀಗ ಜೂ.4ರಂದು ಮೆಟ್ರೊ ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಲು ಮುಂದಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಎಸ್ಮಾ ಅಸ್ತ್ರ ಬಳಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಈಗಾಗಲೇ ನಗರಾಭಿವೃದ್ದಿ ಇಲಾಖೆಯು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದು , ಮೆಟ್ರೊ ಸಿಬ್ಬಂದಿ ಮುಷ್ಕರ ನಡೆಸದಂತೆ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ಮೆಟ್ರೊ ರೈಲು ಸಾರ್ವಜನಿಕರ ಸೇವೆಗೆ ಬಳಕೆ ಮಾಡಲಾಗುತ್ತದೆ. ಲಕ್ಷಾಂತರ ಜನರು ಇದರ ಮೇಲೆ ಅವಲಂಬಿತರಾಗಿರುತ್ತಾರೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರದಲ್ಲಿ ಒಂದು ದಿನ ಮೆಟ್ರೊ ರೈಲು ಸ್ಥಗಿತಗೊಂಡರೆ ಸಾರ್ವಜನಿಕರ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಹೀಗಾಗಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.

ಇನ್ನು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್, ನಾವು ಮೆಟ್ರೋ ರೈಲು ಸಿಬ್ಬಂದಿಗೆ ಪ್ರತಿಭಟನೆ ನಡೆಸದಂತೆ ಮನವಿ ಮಾಡಿಕೊಂಡಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುವುದು ಸರಿಯಲ್ಲ. ಈಗಲೂ ಮಾತುಕತೆಗೆ ಸಿದ್ಧರಿದ್ದೇವೆ. ಒಂದು ವೇಳೆ ನಮ್ಮ ಮಾತು ಮೀರಿ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin