Thursday, April 25, 2024
Homeರಾಜ್ಯರಾಜ್ಯಾದ್ಯಂತ ಇಂದಿನಿಂದ 2024ನೇ ಸಾಲಿನ ಸಿಇಟಿ ಪರೀಕ್ಷೆ ಆರಂಭ

ರಾಜ್ಯಾದ್ಯಂತ ಇಂದಿನಿಂದ 2024ನೇ ಸಾಲಿನ ಸಿಇಟಿ ಪರೀಕ್ಷೆ ಆರಂಭ

ಬೆಂಗಳೂರು, ಏ.18- ವೃತ್ತಿಪರ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಇಂದು ರಾಜ್ಯಾದ್ಯಂತ ಆರಂಭವಾಯಿತು. ಭಾರೀ ಬಿಗಿಭದ್ರತೆ ಹಾಗೂ ಕಟ್ಟುನಿಟ್ಟಿನ ಕಟ್ಟುನಿಟ್ಟಿನ ಕ್ರಮಗೊಳಿಂದಿಗೆ ಕರ್ನಾಟಕ ಪರೀಕ್ಷಾ ಪ್ರಾಕಾರ ಪರೀಕ್ಷೆ ನಡೆಸುತ್ತಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳು ತಲುಪಿದ್ದು, ಸುಸೂತ್ರವಾಗಿ ಪರೀಕ್ಷೆ ಆರಂಭವಾಗಿದೆ.

ಈ ತನಕ ಯಾವುದೇ ಗೊಂದಲ ಉಂಟಾಗಿಲ್ಲ ಎಂದು ಕೆಇಎ ಮೂಲಗಳು ತಿಳಿಸಿವೆ. ಕೊನೆಗಳಿಗೆವರೆಗೂ ಕೆಲವೊಂದು ವಿದ್ಯಾರ್ಥಿಗಳು ಪ್ರವೇಶಪತ್ರ ಡೌನ್‍ಲೋಡ್ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದರು ಎಂದು ಮೂಲಗಳು ಹೇಳಿವೆ.ಇಂದು ಬೆಳಿಗ್ಗೆ 10.30ರಿಂದ 11.50 ಗಂಟೆವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ಗಣಿತ ಪರೀಕ್ಷೆಗಳು ನಡೆದಿವೆ.

ನಾಳೆ ಬೆಳಿಗ್ಗೆ 10.30ರಿಂದ 11.50 ಗಂಟೆವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50ರವರೆಗೆ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಏ.20ರಂದು ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳಿಗೆ ಮಾತ್ರ ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ಬೆಳಗಾವಿಯಲ್ಲಿ ನಡೆಯಲಿದೆ.

ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಕಾರದ ಮಾಹಿತಿ ಪ್ರಕಾರ, 3,81,887 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್‍ಗಳಿಗೆ ಸೇರ ಬಯಸುವವರು ಸೇರಿದ್ದಾರೆ.

ಬೆಂಗಳೂರಿನ 170 ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ 738 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ 3,49,637 ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ.

3,18,865 ವಿದ್ಯಾರ್ಥಿಗಳು ಸಿಇಟಿ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು 3.27 ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆಯಲು ಅರ್ಹತೆ ಹೊಂದಿದ್ದಾರೆ.ಸಿಇಟಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಡ್ರೈವಿಂಗ್ ಲೈಸೆನ್ಸ್, ಪಾಸ್‍ ಪೋರ್ಟ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ದ್ವಿತೀಯ ಪಿಯುಸಿ ಪ್ರವೇಶ ಪತ್ರ ಹಾಜರುಪಡಿಸುವ ಷರತ್ತು ವಿಧಿಸಲಾಗಿತ್ತು.

ಪರೀಕ್ಷಾ ಕೋಠಡಿಗೆ ಯಾವುದೇ ರೀತಿಯ ಕೈಗಡಿಯಾರ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳು, ಮೊಬೈಲ್ ಫೋನ್, ಬ್ಲೂಟೂಥ್, ಸ್ಲೈಡ್ ರೂಲ್ಸ್, ಕ್ಯಾಲ್ಕ್ಯುಲೇಟರ್, ವೈಟ್‍ಫ್ಲ್ಯೂಯಿಡ್, ವೈರ್ಲೆಸ್ ಸೆಟ್ಸ್, ಪೇಪರ್ ಚೀಟಿ, ಬುಕ್ಸ್, ಪುಸ್ತಕ ಮೊದಲಾದವುಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವುದನ್ನು ನಿಷೇಸಲಾಗಿತ್ತು.

ಅಭ್ಯರ್ಥಿಗಳು ಪರೀಕ್ಷೆಯು ಪ್ರಾರಂಭವಾಗುವ ಮೊದಲನೆಯ ಬೆಲ್ ಆಗುವ ಕನಿಷ್ಠಪಕ್ಷ ಎರಡು ಗಂಟೆಗೂ ಮೊದಲು ಪರೀಕ್ಷಾ ಕೇಂದ್ರದ ಆವರಣದಲ್ಲಿ ಹಾಜರಿರಬೇಕು. ಮೂರನೇ ಬೆಲ್ ಆದ ನಂತರ ಪರೀಕ್ಷಾ ಕೊಠಡಿ ಪ್ರವೇಶಿಸಲು ಅಭ್ಯರ್ಥಿಗಳಿಗೆ ಅವಕಾಶವಿಲ್ಲ. ನೀಲಿ ಅಥವಾ ಕಪ್ಪು ಶಾಯಿಯ ಬಾಲ್ ಪಾಯಿಂಟ್ ಪೆನ್ನು ಮಾತ್ರ ಬಳಸಬೇಕು ಎಂದು ತಿಳಿಸಲಾಗಿತ್ತು.

RELATED ARTICLES

Latest News