ಮಾಂಗಲ್ಯ ಸರ ಕದ್ದಿದ್ದವನ ಬಂಧನ : 3.46 ಲಕ್ಷ ಮೌಲ್ಯದ ಆಭರಣಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಫೆ.24- ಮಾಂಗಲ್ಯ ಸರ ಕಳವಿನ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸಿರುವ ಪೊಲೀಸರು ಸುಮಾರು 3 ಲಕ್ಷದ 46 ಸಾವಿರ 500 ರೂ. ಮËಲ್ಯದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಹನುಮಂತ (22) ಬಂಧಿತ ಕಳ್ಳ. ಜನವರಿ 25ರಂದು ಬಸವರಾಜ ಹೆದ್.ಜಿ.ಎಂ ಎಂಬುವರ ಮನೆಯ ಕಿಟಕಿ ಮೂಲಕ ಅವರ ತಾಯಿಯ ಕೊರಳಲ್ಲಿದ್ದ 33 ಗ್ರಾಂನ ಬಂಗಾರದ ಮಾಂಗಲ್ಯ ಸರ ಹಾಗೂ ಮೊಬೈಲ್ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಸ್‍ಪಿ ಹನುಮಂತರಾಯ, ಎಎಸ್‍ಪಿ ಎಂ. ರಾಜೀವ್, ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ ಯು. ಐತಾಳ ಮತ್ತು ಕೇಂದ್ರ ವೃತ್ತ ನಿರೀಕ್ಷಕ ಗುರುಬಸವರಾಜ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್‍ಐಗಳಾದ ಅಬ್ದುಲ್ ಖಾದರ್ ಜಿಲಾನಿ, ಆರ್. ವೀರೇಶ ಹಾಗೂ ಸಿಬ್ಬಂದಿಗಳಾದ ಶಂಕರ್ ಜಾದವ್, ಪ್ರಕಾಶ, ದಾದಾಖಲಂದರ್, ಮಂಜುನಾಥ, ಗಿರೀಶ, ರಾಘವೇಂದ್ರ ಒಳಗೊಂಡ ತಂಡ ತನಿಖೆ ಕೈಗೊಂಡು ಪ್ರಕರಣದಲ್ಲಿ ಕಳ್ಳತನವಾದ ಮೊಬೈಲ್‍ನ ಐಎಂಇಐ ನಂಬರ್‍ನ ಸಿಡಿಆರ್ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಟಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ ಮಾಡುವಾಗ ಬಂಧಿತ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿ ಕೇಂದ್ರ ಕಾರಾಗೃಹ ಬಂದಿಖಾನೆಯಲ್ಲಿಡಲಾಗಿದೆ. ನಂತರ ಆರೋಪಿಯನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಒಳಪಡಿಸಿದಾಗ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಳ್ಳತನದ ಜೊತೆಗೆ ಬಳ್ಳಾರಿ ಜಿಲ್ಲಾಯ ಕೌಲ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 43 ಗ್ರಾಂ ಬಂಗಾರದ ಮಾಂಗಲ್ಯ ಸರ ಕಳ್ಳತನದ ಪ್ರಕರಣವನ್ನು ಬೇಧಿಸಲಾಗಿದೆ.

Facebook Comments