ಮೈಸೂರಲ್ಲಿ ಸರಗಳ್ಳರ ಹಾವಳಿ, ಅಲರ್ಟ್ ಆದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 3- ನಗರದಲ್ಲಿ ನಿನ್ನೆ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ಐದು ಕಡೆಗಳಲ್ಲಿ ಸರಗಳ್ಳತನ ನಡೆದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಬೆಳಗಿನಿಂದಲೆ ಕಾರ್ಯಾಚರಣೆಗೆ ಇಳಿದು ದ್ವಿಚಕ್ರ ವಾಹನಗಳ ತಪಾಸಣೆಯನ್ನು ಕೈಕೊಂಡರು.

ನಗರದ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರ ನೇತೃತ್ವದಲ್ಲಿ ನಾಕಾಬಂದಿ ಹಾಕಿ ದ್ವಿಚಕ್ರ ವಾಹನಗಳ ತಪಾಸಣೆ ಕೈಗೊಳ್ಳಲಾಯಿತು. ಅದರಲ್ಲೂ ಪ್ರಮುಖವಾಗಿ ನಗರದ ಮುಖ್ಯ ರಸ್ತೆಗಳು, ವೃತ್ತಗಳು ಸೇರಿದಂತೆ ಎಲ್ಲೆಡೆ ಶುಭೋದಯ ಕಾರ್ಯಾಚರಣೆಗಾಗಿ ಪೊಲೀಸರೇ ರಸ್ತೆಗಿಳಿದ್ದಿದರು.

ನಗರದ ವಿದ್ಯಾರಣ್ಯಪುರ, ಎನ್.ಆರ್. ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ಸ್ವತಹ ಕೆ.ಟಿ.ಬಾಲಕೃಷ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ನಿನ್ನೆ ಒಂದೇ ದಿನ ಸುಮಾರು 2ಗಂಟೆಗಳ ಅವಧಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದವರು, ಮನೆ ಮುಂದೆ ರಂಗೋಲಿ ಹಾಕುತ್ತಿದ್ದವರು, ವೃದ್ಧರನ್ನು ಟಾರ್ಗೆಟ್ ಮಾಡಿಕೊಂಡು 5 ಕಡೆ ಸರಗಳವು ಮಾಡಿದ್ದ ದುಷ್ಕರ್ಮಿಗಳ ಪತ್ತೆಗಾಗಿ ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದರು.

ಈ ಮೂಲಕ ಬೈಕ್ ಸವಾರರು ಎಲ್ಲಿಂದ ಬರುತ್ತಿದ್ದಾರೆ, ವಾಹನದ ದಾಖಲೆಗಳು, ಇನ್ನಿತರ ಮಾಹಿತಿಗಳನ್ನು ಪಡೆದರು. ನಿನ್ನೆ ನಡೆದ ಕಳವು ಪ್ರಕರಣಗಳಲ್ಲಿ ಕರೀಷ್ಮಾ ಬೈಕ್ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಅವುಗಳ ತಪಾಸಣೆಯನ್ನು ತೀವ್ರಗೊಳಿಸಲಾಗಿದ್ದು, ಇದರೊಂದಿಗೆ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ಸಹ ರವಾನಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಮೈಕ್‍ಗಳ ಮೂಲಕ ಪ್ರಚಾರ ಮಾಡಲಾಗುತ್ತಿದ್ದು, ಅಗತ್ಯವಿದ್ದಾಗ ಮಾತ್ರ ಒಡವೆ ಬಳಸುವಂತೆ, ವಿಳಾಸ ಕೇಳುವ ನೆಪದಲ್ಲಿ ಮನೆ ಮುಂದೆ ಬರುವವರ ನಡುವೆ ಅಂತರ ಕಾಯ್ದುಕೊಂಡು ಮಾಹಿತಿ ನೀಡುವಂತೆ, ಮನೆ ಮುಂದೆ ರಂಗೋಲಿ ಹಾಕುವಾಗ ಯಾರನ್ನಾದರೂ ಜತೆಯಲ್ಲಿಟ್ಟುಕೊಳ್ಳುವಂತೆ, ಒಡವೆ ಇರುವುದು ಪ್ರದರ್ಶನಕ್ಕಲ್ಲ, ಅಗತ್ಯವಿದ್ದಾಗ ಮಾತ್ರ ಬಳಸಿ ಎಂದು ಸೂಚನೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ