48 ಗಂಟೆಗಳಲ್ಲಿ 6 ಸರಗಳ್ಳರ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.20-ದೆಹಲಿಯಿಂದ ಟ್ರಕ್ ಮತ್ತು ಬಸ್‍ಗಳಲ್ಲಿ ಬೆಂಗಳೂರು ನಗರಕ್ಕೆ ಬಂದು ಬೈಕ್ ಕದ್ದು , ಸರಣಿ ಸರ ಅಪಹರಣ ಮಾಡಿ ಪರಾರಿಯಾಗುತ್ತಿದ್ದ ದೆಹಲಿಯ ಐವರು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಕೃತ್ಯ ನಡೆದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಈಶಾನ್ಯ ವಿಭಾಗದ ಬಾಗಲೂರು ಮತ್ತು ಯಲಹಂಕ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ದೆಹಲಿಯ ಸುರೇಶ್ ಕುಮಾರ್(32), ಹಸೀನ್ ಖಾನ್(23), ಇರ್ಷಾದ್(24), ಸಲೀಂ(22), ಅಪ್ರೋಜ್(25) ಮತ್ತು ಕೇರಳ ಮೂಲದ ಹ್ಯಾರೀಸ್ ಬಂಧಿತ ಸರಗಳ್ಳರು. ಆರೋಪಿಗಳ ಬಂಧನದಿಂದ 6 ಸರ ಅಪಹರಣ ಪ್ರಕರಣಗಳು ಮತ್ತು ಒಂದು ಬೈಕ್ ಕಳ್ಳತನ ಪ್ರಕರಣ ಸೇರಿ 7 ಪ್ರಕರಣಗಳು ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 10.50 ಲಕ್ಷ ರೂ.ಗಳಾಗಿರುತ್ತದೆ.

ಫೆ.16ರಿಂದ 17ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ನಡುವೆ ಚಿಕ್ಕಜಾಲ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ಮತ್ತು ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಎರಡು ಸರ ಅಪಹರಣ, ಯಲಹಂಕ ಠಾಣೆ ವ್ಯಾಪ್ತಿಯಲ್ಲಿ 2, ದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 1 ಮತ್ತು ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಸರಣಿ ಸರ ಅಪಹರಣ ನಡೆದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು.

ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳು ಸ್ವಲ್ಪ ಸಮಯದ ಅಂತರದಲ್ಲೇ ಕೃತ್ಯ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬ ಅವರ ಮಾರ್ಗದರ್ಶನದಂತೆ ಎಸಿಪಿ ನಾಗರಾಜ ಅವರ ನೇತೃತ್ವದಲ್ಲಿ ಯಲಹಂಕ ಠಾಣೆ ಇನ್‍ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ, ಬಾಗಲೂರು ಠಾಣೆ ಇನ್‍ಸ್ಪೆಕ್ಟರ್ ಪ್ರಶಾಂತ್.ಆರ್ ವರ್ಣಿ ಮತ್ತು ಪಿಎಸ್‍ಐ ರವಿಚಂದ್ರ, ಎನ್. ನಾಗರಾಜ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು.

ತನಿಖಾ ತಂಡವು ಕೃತ್ಯ ನಡೆದ ಸ್ಥಳಗಳಲ್ಲಿನ ಅಕ್ಕಪಕ್ಕದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದಾಗ ಆರೋಪಿಗಳು ಕಪ್ಪು ಬಣ್ಣದ ಪಲ್ಸರ್ ವಾಹನವನ್ನು ಸರ ಅಪಹರಣಕ್ಕೆ ಬಳಸಿರಿವುದು ಕಂಡುಬಂದಿದೆ. ಆದರೆ ಸಿಸಿ ಕ್ಯಾಮೆರಾದಲ್ಲಿ ಈ ಬೈಕ್‍ನ ನಂಬರ್ ಪ್ಲೇಟ್ ಮತ್ತು ಆರೋಪಿಗಳ ಚಹರೆ ಅಸ್ಫಷ್ಟವಾಗಿತ್ತು. ಸರ ಕಳೆದುಕೊಂಡವರಿಂದ ಮಾಹಿತಿಯನ್ನು ಪಡೆದಾಗ ಆರೋಪಿಗಳು ಉತ್ತರ ಭಾರತದವರಂತೆ ಕಾಣುತ್ತಿದ್ದರೆಂದು ಹೇಳಿದ್ದಾರೆ.

ಈ ಮಾಹಿತಿಯನ್ನು ಆಧರಿಸಿ ಫೆ.18ರಂದು ಸಾದರಹಳ್ಳಿ ಗೇಟ್ ಬಳಿಯ ಹೋಟೆಲ್ ಸಮೀಪದ ಸಿಸಿಟಿವಿಗಳನ್ನು ಪರಿಶೀಲನೆ ಮಾಡುತ್ತಿದ್ದಾಗ ಆರೋಪಿಗಳು ಊಟಕ್ಕೆ ಬಂದಿರುವುದು ಗೊತ್ತಾಗಿದೆ. ತಕ್ಷಣ ಸಿಸಿಟಿವಿಯಲ್ಲಿ ಅಸ್ಪಷ್ಟ ಚಹರೆಯನ್ನು ಹೋಲುವ ವ್ಯಕ್ತಿಗಳು ಹೋಟೆಲ್‍ನಲ್ಲಿ ಇರುವುದು ಕಂಡು ಹಿಡಿಯಲು ಹೋದಾಗ ಆರೋಪಿಗಳು ಓಡಲು ಯತ್ನಿಸಿದ್ದಾರೆ.

ತಕ್ಷಣ ಕಾರ್ಯಾಪ್ರವೃತ್ತರಾದ ಸಿಬ್ಬಂದಿ ಅವರನ್ನು ಹಿಂಬಾಲಿಸಿ ಆರು ಮಂದಿಯನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಜೇಬುಗಳನ್ನು ಪರಿಶೀಲಿಸಿದಾಗ ಆರೋಪಿ ಸುರೇಶ್ ಜೇಬಿನಲ್ಲಿ ಆರು ಮಾಂಗಲ್ಯದ ಚಿನ್ನದ ಸರ ಮತ್ತು ತಾಳಿ ಬೊಟ್ಟುಗಳು, ಮೊಬೈಲ್‍ಗಳು ಪತ್ತೆಯಾಗಿವೆ.

ಆರೋಪಿಗಳು ಚಿಕ್ಕಜಾಲ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ನಕಲಿ ನಂಬರ್ ಪ್ಲೇಟ್ ಹಾಕಿ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಮತ್ತು ಆರೋಪಿ ಹ್ಯಾರೀಸ್‍ಗೆ ಸಂಬಂಧಿಸಿದ ತಾರ್ ಜೀಪ್ ಸಹ ಪತ್ತೆಯಾಗಿದೆ. ಬೆಂಗಳೂರಿನ ದೇವನಹಳ್ಳಿ ವ್ಯಾಪ್ತಿಯ ಕನ್ನಮಂಗಲದಲ್ಲಿ ಚಿಪ್ಸ್ ಅಂಗಡಿ ನಡೆಸಿಕೊಂಡಿದ್ದ ಕೇರಳ ಮೂಲದ ಚಿಪ್ಸ್ ವ್ಯಾಪಾರಿ ಹ್ಯಾರೀಸ್ ದೆಹಲಿ ಮೂಲದ ಸುರೇಶ್‍ಕುಮಾರ್‍ನನ್ನು ಫೆ.1ರಂದು ಕರೆಸಿಕೊಂಡು ಸರ ಅಪಹರಣ ಮಾಡಲು ಬೆಂಗಳೂರಿನ ಕೆಲವು ಪ್ರದೇಶಗಳ ರಸ್ತೆಯನ್ನು ತೋರಿಸಿ ವಾಪಸ್ ಕಳುಹಿಸಿದ್ದನು.

ಫೆ.14ರಂದು ಆರೋಪಿ ಸುರೇಶ್‍ಕುಮಾರ್ ತನ್ನ ಜೊತೆಯಲ್ಲಿ ದೆಹಲಿ ಮೂಲದ ಮೂವರನ್ನು, ಮಧ್ಯಪ್ರದೇಶದ ನಾಗಪುರ ಮಾರ್ಗವಾಗಿ, ಹೈದರಾಬಾದ್ ಮುಖಾಂತರ ಬೆಂಗಳೂರಿಗೆ ಟ್ರಕ್ ಮತ್ತು ಬಸ್‍ಗಳಲ್ಲಿ ಕರೆಸಿಕೊಂಡು ಚಿಕ್ಕಜಾಲ ವ್ಯಾಪ್ತಿಯ ಉತ್ತನಹಳ್ಳಿಯಲ್ಲಿ ಪಲ್ಸರ್ ವಾಹನ ಕಳವು ಮಾಡಿದ್ದಾನೆ. ಹೀಗೆ ಕಳವು ಮಾಡಿದ್ದ ಬೈಕ್‍ನಲ್ಲಿ ಆರೋಪಿಗಳಾದ ಅಪ್ರೋಜ್ ಮತ್ತು ಹಸೀನ್‍ಖಾನ್ ಇಬ್ಬರೂ ಒಮ್ಮೊಮ್ಮೆ ವಾಹನವನ್ನು ಓಡಿಸಿಕೊಂಡು ಸುಭಾಷ್ ವಾಹನದ ಹಿಂಬದಿ ಕುಳಿತುಕೊಂಡು ಹೋಗಿ ಯಲಹಂಕ ವ್ಯಾಫ್ತಿಯಲ್ಲಿ 2 ಕಡೆ ಸರ ಅಪಹರಣ ಮಾಡಿದ್ದಾರೆ. ಅದೇ ದಿನ ಬಾಗಲೂರಿನಲ್ಲಿ 2 ಕಡೆ, ದೇವನಹಳ್ಳಿ ಮತ್ತು ಅಮೃತಹಳ್ಳಿ ವ್ಯಾಪ್ತಿಯಲ್ಲಿ ಸರ ಅಪಹರಣ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

# ಆರೋಪಿಗಳ ಮಾಹಿತಿ:
ಆರೋಪಿಗಳೆಲ್ಲರೂ ಹೊರರಾಜ್ಯದ ನಿವಾಸಿಗಳಾಗಿದ್ದು, ರೂಢಿಗತ ಅಪರಾಧಿಗಳಾಗಿದ್ದಾರೆ. ಆರೋಪಿ ಸುರೇಶ್‍ಕುಮಾರ್ ಮೇಲೆ 24, ಸಲೀಂ ವಿರುದ್ಧ 21 ಮತ್ತು ಅಪ್ರೋಜ್ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ದೆಹಲಿಯಿಂದ ಬೆಂಗಳೂರಿಗೆ ಬಂದು ಎರಡೂಮೂರು ದಿನಗಳಲ್ಲಿ ಸರಣಿಯಾಗಿ ಸರ ಅಪಹರಣ ಮಾಡಿಕೊಂಡು ವಾಪಸ್ ದೆಹಲಿಗೆ ಹೊರಡಲು ಸಜ್ಜಾಗಿದ್ದ ಅಧಿಕಾರಿ, ಸಿಬ್ಬಂದಿಗಳ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments