ಸಾರಥಿಯ ಮುಂದಿವೆ ಬೆಟ್ಟದಷ್ಟು ಸವಾಲುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Kumara-Swamy
ಎನ್.ಎಸ್.ರಾಮಚಂದ್ರ 
ಹೊಸ ಸಾರಥಿ, ಹೊಸ ಸರ್ಕಾರ, ಹತ್ತು- ಹಲವು ನಿರೀಕ್ಷೆಗಳು… ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರವು ವಿದ್ಯುಕ್ತವಾಗಿ  ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಸಮ್ಮಿಶ್ರ ಸರ್ಕಾರವು ಸರ್ಕಾರಿ ಯಂತ್ರಕ್ಕೆ ತಕ್ಷಣದಿಂದ ಚಾಲನೆ ನೀಡಬೇಕಾಗಿದೆ. ಇದು ಸಮ್ಮಿಶ್ರ ಸರ್ಕಾರವಾದರೂ ಕೂಡ ಸಮಸ್ತ ಪ್ರಜೆಗಳ ಗಮನ ಕೇಂದ್ರೀಕರಿಸಿರುವುದು ಕುಮಾರಸ್ವಾಮಿ ಅವರ ನಡೆಯತ್ತ. ಸಿದ್ದರಾಮಯ್ಯನವರ ನೇತೃತ್ವದ ಐದು ವರ್ಷ ಅವಧಿಯ ಸರ್ಕಾರವು ನಮಗೆ ಕೊಟ್ಟಿರುವುದಕ್ಕಿಂತ ಹೆಚ್ಚಿನದನ್ನು ಕುಮಾರಣ್ಣನವರು ಕೊಡುತ್ತಾರೆ ಅನ್ನುವುದು ಜನರ ನಿರೀಕ್ಷೆ. ಆ ನಿರೀಕ್ಷೆಗಳ ಅನುಷ್ಠಾನದ ಸಾಧ್ಯಾಸಾಧ್ಯತೆಯ ಕುರಿತು ತಜ್ಞರ ಅಭಿಪ್ರಾಯ ಹೀಗಿದೆ.

ಈ ನಿರೀಕ್ಷೆಗಳ ಪಟ್ಟಿಯ ಅಗ್ರಸ್ಥಾನದಲ್ಲಿ ಇರುವುದು ರೈತರ ಸಾಲಮನ್ನಾ. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದಿರುವ ಸಾಲವನ್ನು ನಮ್ಮ ಸರ್ಕಾರವು ಅಧಿಕಾರಕ್ಕೆ ಬಂದ 24 ಗಂಟೆಗಳ ಅವಧಿಯೊಳಗೆ ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿಯವರು ಭರವಸೆ ಕೊಟ್ಟಿದ್ದರು. ಇದು ಅಷ್ಟು ಸುಲಭವೆ..? ಸರ್ಕಾರದ ಮೇಲೆ ಈಗಾಗಲೇ ಎರಡು ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲದ ಹೊರೆ ಇದೆ. ಸರ್ಕಾರ ಸಾಲ ಮನ್ನಾ ಮಾಡುವ ಸಲುವಾಗಿ ಕನಿಷ್ಠ ಪಕ್ಷ ಐವತ್ತಾರು ಸಾವಿರ ಕೋಟಿ ಹೆಚ್ಚುವರಿ ಹಣ ಕೊಡಬೇಕು. ಸಾಮಾನ್ಯ ನಾಗರಿಕನ ಮೇಲೆ ಭಾರ ಹೊರಿಸದೆ ಈ ಪ್ರಮಾಣದ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ ಸಾಧ್ಯವೆ..? ಇದು ಕುಮಾರಸ್ವಾಮಿಯವರ ಮುಂದಿರುವ ದೊಡ್ಡ ಸವಾಲು.

ತಜ್ಞರು ಹೇಳುವ ಪ್ರಕಾರ, ರೈತನನ್ನು ಸಾರಾಸಗಟಾಗಿ ವರ್ಗೀಕರಿಸಬಾರದು. ಯಾರು ವಾಸ್ತವವಾಗಿ ಕೃಷಿಯೊಂದನ್ನೇ ನಂಬಿ ಕಾಯಕ ಮಾಡುತ್ತಾರೋ ಅವರು ಮಾತ್ರ ರೈತರು. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ, ಬೇಸಾಯ ಮಾಡಿ ಬೆಳೆದ ಬೆಳೆಯಿಂದ ನಷ್ಟವಾದಾಗ ಈ ರೈತ ಕಂಗಾಲಾಗುತ್ತಾನೆ. ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಾನೆ. ಇಂತಹ ರೈತನ ಸಾಲಮನ್ನಾ ಮಾಡುವುದು ಅನಿವಾರ್ಯ, ಅಗತ್ಯ. ಸರ್ಕಾರಿ ಉದ್ಯೋಗದಲ್ಲಿರು ವವರು, ಬೇರೆ ಬೇರೆ ವಹಿವಾಟು ನಡೆಸುತ್ತಿರುವವರು ಕೂಡ ಕೃಷಿ ಸಾಲ ಮಾಡಿರುತ್ತಾರೆ. ಈ ವರ್ಗಕ್ಕೆ ಸೇರಿದ ಜನರ ಸಾಲಮನ್ನಾ ಮಾಡುವ ಔಚಿತ್ಯ ಕಾಣುವುದಿಲ್ಲ. ಹೀಗೆ ವರ್ಗೀಕರಣ ಮಾಡಿದಾಗ ಸಾಲ ಪರಿಹಾರದ ಮೊತ್ತ ಕಡಿಮೆ ಆಗುತ್ತದೆ. ಸಾಲಮನ್ನಾದಷ್ಟೇ ಮುಖ್ಯವಾದ ಮತ್ತೊಂದು ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ಅದು ರೈತನು ಬೆಳೆದ ಫಸಲಿಗೆ ಯೋಗ್ಯ ಬೆಲೆ ನಿಗದಿ ಮಾಡುವುದು. ಮಧ್ಯವರ್ತಿಗಳ ಹಾವಳಿಯಿಂದ ರೈತರ ಬದುಕು ದುಸ್ತರವಾಗಿದೆ. ಇದನ್ನು ತಪ್ಪಿಸಿ ಎಲ್ಲ ರೀತಿಯ ಫಸಲನ್ನು ಯೋಗ್ಯ ಬೆಲೆಗೆ ಸರ್ಕಾರವೇ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಬೇಕು. ಇದರಿಂದ ರೈತಾಪಿ ವರ್ಗ-ಗ್ರಾಹಕ ವರ್ಗ ಇಬ್ಬರಿಗೂ ಲಾಭ. ಸಾಲಮನ್ನಾ ಮಾಡುವ ಅಗತ್ಯವೇ ಇರುವುದಿಲ್ಲ.

ಕೈಗಾರಿಕೆ:

ಕೃಷಿಯನ್ನು ಬಿಟ್ಟರೆ ರಾಜ್ಯಕ್ಕೆ ಸಂಪನ್ಮೂಲ ನೀಡುವುದು ಔದ್ಯೋಗಿಕ ವಲಯ. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯದ ಔದ್ಯೋಗಿಕ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸಿದೆ. ಕೈಗಾರಿಕೆ-ಉದ್ಯಮವನ್ನು ನಿರ್ಲಕ್ಷಿಸಿರುವುದೇ ಇದಕ್ಕೆ ಕಾರಣ ಎಂದು ತಜ್ಞರ ಅಭಿಮತ. ಹೊಸ ಸರ್ಕಾರವು ಔದ್ಯೋಗಿಕ ಪ್ರಗತಿಯ ಕಡೆ ಗಮನ ಕೊಡುವುದು ಅತ್ಯಗತ್ಯ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೋ ದ್ಯಮಿಗಳು ವಿಪರೀತ ಹಿಂಸೆ ಅನುಭವಿಸುತ್ತಿದ್ದಾರೆ. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮವು ಕೈಗಾರಿಕೋದ್ಯಮಿಗಳಿಗೆ ಭೂಮಿಯನ್ನು ನಿಗದಿತ ಅವಧಿಗೆ ಲೀಸ್ ಆಧಾರದ ಮೇಲೆ ಕೊಡುತ್ತದೆ. ಹೀಗೆ ಪಡೆದ ಜಮೀನಿನಲ್ಲಿ ಪ್ರಾರಂಭಿಸುವ ಉದ್ಯಮಗಳಿಗೆ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‍ಗಳು ಸಾಲರೂಪದಲ್ಲಿ ಬಂಡವಾಳ ಕೊಡುವುದಿಲ್ಲ. ಕೆ.ಎಸ್.ಎಫ್.ಸಿ.ಯು ಹಣ ನೀಡುತ್ತದೆಯಾದರೂ ಹೆಚ್ಚುವರಿ ಭದ್ರತೆ ಕೇಳುತ್ತದೆ. ಈ ಅವೈಜ್ಞಾನಿಕ ಕ್ರಮವನ್ನು ರದ್ದುಪಡಿಸಬೇಕು. ಕೃಷಿ ಮತ್ತು ಕೈಗಾರಿಕೆ ಇವೆರಡೂ ರಾಜ್ಯದ ಸಂಪನ್ಮೂಲದ ಪ್ರಮುಖ ಮೂಲಗಳು. ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳಲ್ಲಿ ಹೆಚ್ಚಳವಾದಾಗ ಮಾತ್ರ ರಾಜ್ಯವು ಸುಭಿಕ್ಷವಾಗಿರಲು ಸಾಧ್ಯ. ಇಲ್ಲದಿದ್ದರೆ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ಸಮಗ್ರ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.

ವಿದ್ಯುತ್:

ವಿದ್ಯುತ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿಕೊಂಡರೂ ಕೂಡ ರಾಜ್ಯವನ್ನು ವಿದ್ಯುತ್ ಕೊರತೆಯು ಕಾಡುತ್ತಲೇ ಇದೆ. ಇದು ಇಡೀ ರಾಜ್ಯಕ್ಕೆ ಮಾರಕ. ವಿದ್ಯುತ್ ಕೊರತೆಯಿಂದ ಕೃಷಿ ಮತ್ತು ಕೈಗಾರಿಕೆ ಸೊರಗಿವೆ. ಮನೆ ಛಾವಣಿ ಮೇಲೆ ಜನರು ಸೌರ ವಿದ್ಯುತ್ ಘಟಕ ಸ್ಥಾಪಿಸಿ ಆ ಮೂಲಕ ವಿದ್ಯುತ್ ಉತ್ಪಾದಿಸಿ ಅದನ್ನು ಸರ್ಕಾರಕ್ಕೆ ಮಾರುವ ಕ್ರಮವನ್ನು ಅಂದಿನ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಜಾರಿಗೆ ತಂದಿದ್ದರು. ಆದರೆ, ವಿದ್ಯುತ್ ನಿಗಮಗಳು ಖರೀದಿ ದರವನ್ನು ಗಣೀಯವಾಗಿ ಕಡಿಮೆ ಮಾಡಿದ ಪರಿಣಾಮ ನಾಗರಿಕರು ಇದರಲ್ಲಿ ಆಸಕ್ತಿ ಕಳೆದುಕೊಂಡರು. ಸೌರ ವಿದ್ಯುತ್ ಘಟಕ
ಸ್ಥಾಪಿಸಿದವರು ನಷ್ಟ ಅನುಭವಿಸುವಂತಾಯಿತು. ಕೃಷಿ ವಲಯಕ್ಕೆ ದಿನಕ್ಕೆ ಕನಿಷ್ಠ 14 ಗಂಟೆ ಕಾಲ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ಮುಖ್ಯಮಂತ್ರಿಯವರು ಖುದ್ದಾಗಿ ನೋಡಿಕೊಂಡು ಬಂದಿರುವ ಇಸ್ರೇಲ್ ಮಾದರಿ ಕೃಷಿ ಪದ್ಧತಿಯನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಶಿಕ್ಷಣ:

ಇನ್ನು ಶಿಕ್ಷಣ ಕ್ಷೇತ್ರ, ನಮ್ಮ ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಪೋ ಷಕರನ್ನು ಕಿತ್ತು ತಿನ್ನುತ್ತಿವೆ. ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸುವುದು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ದುಸ್ತರವಾಗಿದೆ. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಸೈಕಲ್, ಪೌಷ್ಠಿಕಾಂಶದಿಂದ ಕೂಡಿದ ಆಹಾರ, ಹಾಲು ಎಲ್ಲವನ್ನೂ ಕೊಟ್ಟರೂ ಕೂಡ ಮಕ್ಕಳು ಮತ್ತು ಪೋ ಷಕರು ನಿರಾಸಕ್ತಿ ತೋರುತ್ತಾರೆ. ಇದಕ್ಕೆ ಕಾರಣವೇನು? ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಿಂತ ಅಧ್ಯಾಪಕರ ಸಂಖ್ಯೆಯೇ ಹೆಚ್ಚು. ಇಂತಹ ಅಸಮತೋಲನ ಹೋಗಲಾಡಿಸಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಿಸಬೇಕು. ಉತ್ತರ ಪ್ರದೇಶದಲ್ಲಿ ಮಾಡಿರುವ ಹಾಗೆ ಸರ್ಕಾರಿ ಅಧಿಕಾರಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವಂತೆ ಕಾನೂನು ರೂಪಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಪದ್ಧತಿಗೆ ಕಡಿವಾಣ ಹಾಕಬೇಕಾಗಿದೆ. ಇದರ ಜತೆಗೆ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸಿ, ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ರೂಪಿಸಬೇಕಾಗಿದೆ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತೇವೆ ಎಂದು ಸಮಾಜದ ಪ್ರತಿಷ್ಠಿತ ವರ್ಗದವರು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ ಮಾಡಬೇಕಾಗಿದೆ. ಸರ್ವರಿಗೂ ಸಮಾನ ಶಿಕ್ಷಣ ಸಾಂವಿಧಾನಿಕ ಹಕ್ಕು, ಅದು ದಕ್ಕಬೇಕು. ಶಾಲೆಗಳ ಪಠ್ಯಕ್ರಮದಲ್ಲಿ ಯೋಗ, ಕ್ರೀಡೆಯನ್ನು ಕಡ್ಡಾಯ ಮಾಡಬೇಕು.

ಆರೋಗ್ಯ:

ಮಕ್ಕಳನ್ನು ರೋಗ ಮುಕ್ತ ವಾತಾವರಣದಲ್ಲಿ ಬೆಳೆಸುವ ಪದ್ಧತಿ ಬಂದರೆ, ದುಬಾರಿ ಬೆಲೆ ತೆತ್ತು ಆಸ್ಪತ್ರೆಗಳಿಗೆ ಹೋಗಿ ಹಣ ಖರ್ಚು ಮಾಡುವ ಅಗತ್ಯವಿರುವುದಿಲ್ಲ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಯುವ ಶಕ್ತಿ ಲಭ್ಯವಿದೆ. ಈ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಪ್ರಾಕೃತಿಕ ಸಂಪನ್ಮೂಲದ ವಿಷಯದಲ್ಲಿ ಕೂಡ ಭಾರತ ಅದರಲ್ಲೂ ಕರ್ನಾಟಕ ತುಂಬಾ ಶ್ರೀಮಂತ.  ಇದರ ಸದ್ಬಳಕೆ ಆಗಬೇಕು, ಆಮದಿಗೆ ಲಗಾಮು ಹಾಕಿ ರಫ್ತಿಗೆ ಹೆಚ್ಚು ಉತ್ತೇಜನ ಕೊಡಬೇಕು. ಬ್ಯಾಂಕಿಂಗ್ ವಲಯವು ಆದ್ಯ ವಲಯಗಳ ಕಡೆ ಗಮನ ಕೊಡಬೇಕು. ಹೊಸ ಮುಖ್ಯಮಂತ್ರಿಗಳು ಉತ್ಸಾಹಿಗಳು. ರೈತರು, ಬಡವರ ಬಗ್ಗೆ ಪ್ರಾಮಾಣಿಕ ಕಳಕಳಿ ಹೊಂದಿರುವವರು. ಅಂದುಕೊಂಡದ್ದನ್ನು ಮಾಡುತ್ತೇವೆ ಎಂಬ ಇಚ್ಛಾಶಕ್ತಿ ಪಡೆದಿರುವಂತ ಹವರು. ಸಂಯುಕ್ತ ಸರ್ಕಾರ ಅನ್ನುವುದು ಇವರಿಗೆ ಸಂಕೋಲೆ ಆಗಬಾರದು. ಯಾರು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡುತ್ತಾರೋ ಅವರನ್ನು ಜನ ಮೆಚ್ಚುತ್ತಾರೆ. ನೂತನ ಮುಖ್ಯಮಂತ್ರಿಗಳು ತಮ್ಮ ಬಹುಮತ ಸಾಬೀತು ಪಡಿಸಿರುವುದರಿಂದ ಆಡಳಿತದ ಕಡೆ ಗಮನ ಕೇಂದ್ರೀಕರಿಸಲು ಸ್ವತಂತ್ರರಾಗಿ ದ್ದಾರೆ. ಅವರಿಂದ ರಾಜ್ಯಕ್ಕೆ ಒಳ್ಳೆಯದಾಗಲಿ ಅನ್ನುವುದು ಹೊಣೆಗಾರಿಕೆಯುಳ್ಳ ಸಮಸ್ತ ನಾಗರಿಕರ ಆಶಯ.

ಸಾಲ ಮನ್ನಾದಷ್ಟೇ ಮುಖ್ಯವಾದ ಮತ್ತೊಂದು ಕ್ರಮವನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ಅದು ರೈತನು ಬೆಳೆದ ಫಸಲಿಗೆ ಯೋಗ್ಯ ಬೆಲೆ ನಿಗದಿ ಮಾಡುವುದು. ಮಧ್ಯವರ್ತಿಗಳ ಹಾವಳಿಯಿಂದ ರೈತರ ಬದುಕು ದುಸ್ತರವಾಗಿದೆ. ಇದನ್ನು ತಪ್ಪಿಸಿ ಎಲ್ಲ ರೀತಿಯ ಫಸಲನ್ನು ಯೋಗ್ಯ ಬೆಲೆಗೆ ಸರ್ಕಾರವೇ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಬೇಕು. ಇದರಿಂದ ರೈತಾಪಿ ವರ್ಗ-ಗ್ರಾಹಕ ವರ್ಗ ಇಬ್ಬರಿಗೂ ಲಾಭ. ಸಾಲಮನ್ನಾ ಮಾಡುವ ಅಗತ್ಯವೇ ಇರುವುದಿಲ್ಲ.

Facebook Comments

Sri Raghav

Admin