ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.16-ದಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಯಾವುದೇ ಆಡಂಬರವಿಲ್ಲದೆ, ಅಭಿಮಾನಿಗಳಿಂದ ಶುಭಾಶಯ ಪಡೆದು ಕುಟುಂಬ ಹಾಗೂ ಆತ್ಮೀಯರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

ರಾಜರಾಜೇಶ್ವರಿ ನಗರದಲ್ಲಿನ ಅವರ ನಿವಾಸಕ್ಕೆ ಆಗಮಿಸಿದ ಸಾವಿರಾರು ಅಭಿಮಾನಿಗಳು ದರ್ಶನ್ ಹೇಳಿದಂತೆ ಯಾವುದೇ ಸದ್ದುಗದ್ದಲವಿಲ್ಲದೆ ಹಾರ, ತುರಾಯಿ ಎಲ್ಲಕ್ಕೂ ಬ್ರೇಕ್ ಹಾಕಿ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.ಕೇಕ್ ಮತ್ತಿತರ ದುಂದುವೆಚ್ಚದ ಹಣವನ್ನು ಅನಾಥಾಶ್ರಮಗಳಿಗೆ ನೀಡುವ , ಅಕ್ಕಿ, ಬೇಳೆ ಮುಂತಾದ ವಸ್ತುಗಳಿಗಾಗಿ ವಿನಿಯೋಗಿಸಲಾಯಿತು. ಇದಕ್ಕಾಗಿ ದರ್ಶನ್ ಅಭಿಮಾನಿಗಳ ಸಂಘ ಬೆನ್ನೆಲುಬಾಗಿ ನಿಂತಿತ್ತು.

ಕನ್ನಡ ಚಿತ್ರರಂಗದ ನಟರಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದರ್ಶನ್, ದಿ ಬಾಸ್ ಎಂದೇ ಜನಪ್ರಿಯರಾಗಿದ್ದು, ಅಭಿಮಾನಿ ಬಳಗದಲ್ಲೂ ದಿ ಬಾಸ್ ಎಂದೇ ಕರೆಸಿಕೊಳ್ಳುತ್ತಾರೆ. ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರದ ಟೀಸರ್ ಇಂದು ಬಿಡುಗಡೆಗೊಳ್ಳುತ್ತಿದೆ.ಐತಿಹಾಸಿಕ ಚಿತ್ರವೂ ಸೇರಿದಂತೆ ಕಮರ್ಷಿಯಲ್ ಚಿತ್ರಗಳಲ್ಲೂ ತಮ್ಮ ಅಭಿನಯದ ಮೂಲಕ ಉತ್ತಮ ಹೆಸರು ಗಳಿಸಿರುವ ದರ್ಶನ್ ಮೆಜೆಸ್ಟಿಕ್ ಚಿತ್ರದ ಮೂಲಕ ಹೆಸರು ಮಾಡಿದವರು.

ಕಲಾಸಿಪಾಳ್ಯ, ಅಯ್ಯ, ನನ್ನ ಪ್ರೀತಿಯ ರಾಮು, ಯಜಮಾನ, ಕುರುಕ್ಷೇತ್ರ, ನವಗ್ರಹ, ಸಾರಥಿ, ಸಂಗೊಳ್ಳಿರಾಯಣ್ಣ, ದಾಸ ದಂತಹ ವಿಭಿನ್ನ ಚಿತ್ರಕಥೆಯ ಚಿತ್ರಗಳಲ್ಲೂ ತಮ್ಮ ಅಭಿನಯ ಚಾತುರ್ಯತೆ ಮೆರೆದು ಯುವ ಸಮೂಹದ ನೆಚ್ಚಿನ ನಟರಾಗಿದ್ದಾರೆ. ಪ್ರಾಣಿಪ್ರಿಯರೂ ಆದ ದರ್ಶನ್ ಹಲವಾರು ಪ್ರಾಣಿಗಳನ್ನು ದತ್ತು ಪಡೆದಿರುವುದಲ್ಲದೆ, ತಮ್ಮ ಫಾರಂ ಹೌಸ್‍ನಲ್ಲಿ ಪ್ರಾಣಿಗಳನ್ನು ಸಾಕಿ ಸಲಹುತ್ತಿದ್ದಾರೆ.

ಪ್ರತಿವರ್ಷ ಯಾವುದಾದರೊಂದು ಪ್ರಾಣಿಯನ್ನು ಫಾರಂಹೌಸ್‍ಗೆ ಸೇರ್ಪಡೆಗೊಳಿಸುವ ಇವರು, ಇತ್ತೀಚಿನ ದಿನಗಳಲ್ಲಿ ತಮ್ಮ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಹಣ ಖರ್ಚು ಮಾಡದಂತೆ ತಿಳಿಸಿದ್ದರು. ಅದರಂತೆ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು ಸೇರಿದಂತೆ ಇನ್ನಿತರ ಆಡಂಬರಗಳನ್ನು ಬಿಟ್ಟು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದಾರೆ.

Facebook Comments

Sri Raghav

Admin