ದಕ್ಷಿಣ ಭಾರತದ ಏಕೈಕ ಕೊರೊನಾ ಮುಕ್ತ ಜಿಲ್ಲೆ ಚಾಮರಾಜನಗರ, ಕೇಂದ್ರ ಪ್ರಶಂಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.5- ದಕ್ಷಿಣ ಭಾರತದ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಾಮರಾಜನಗರ ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರ ಪ್ರಶಂಸೆಯ ಸುರಿಮಳೆಗೈದಿದೆ.

ಚಾಮರಾಜನಗರ ಸುತ್ತಮುತ್ತ ಹಾಟ್‍ಸ್ಪಾಟ್‍ಗಳಿದ್ದರೂ ಈವರೆಗೂ ಒಂದೇ ಒಂದೂ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗದಂತೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮ ಇತರರಿಗೂ ಮಾದರಿ ಎಂದು ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು ಇಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗೆ ನಾನು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ.  ನಿಜಕ್ಕೂ ನಿಮ್ಮ ಜಿಲ್ಲಾಡಳಿತ ಬೇರೆಯವರಿಗೂ ಮಾದರಿಯಾಗುವಂತೆ ಕೆಲಸ ಮಾಡಿದೆ.

ಪೆÇಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯರು, ನರ್ಸ್‍ಗಳು, ಕಂದಾಯ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮಾಡಿರುವ ಕೆಲಸ ನಿಜಕ್ಕೂ ಅಭಿನಂದನಾರ್ಹ. ಮುಂದೆಯೂ ಇದೇ ರೀತಿ ಮುಂದುವರೆಸಿಕೊಂಡು ಹೋಗಿ ಎಂದು ಹರ್ಷವರ್ಧನ್ ಕಿವಿಮಾತು ಹೇಳಿದ್ದಾರೆ.

ಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಒಂದೇ ಒಂದೂ ಪ್ರಕರಣಗಳು ಪತ್ತೆಯಾಗದಂತೆ ಪ್ರಾರಂಭದ ದಿನದಿಂದಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೀರಿ.

ನಿಮ್ಮ ಜಿಲ್ಲೆಗೆ ಹೊಂದಿಕೊಂಡಿರುವ ಪಕ್ಕದ ಮೈಸೂರು, ಮಂಡ್ಯ , ರಾಮನಗರ ಸೇರಿದಂತೆ ಮತ್ತಿತರ ಕಡೆ ಸೋಂಕಿನ ಪ್ರಕರಣಗಳಿದ್ದರೂ ಜಿಲ್ಲಾಡಳಿತ ಅಹೋರಾತ್ರಿ ತೆಗೆದುಕೊಂಡ ಬಿಗಿಕ್ರಮಗಳಿಂದ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕಾಗಿ ನಾನು ನಿಮ್ಮ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹರ್ಷವರ್ಧನ್ ಶ್ಲಾಘಿಸಿದರು.
ಕೇಂದ್ರ ಸಚಿವರು ದೂರವಾಣಿ ಕರೆ ಮಾಡಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸೂಚಿಸಿರುವುದನ್ನು ಸ್ವತಃ ಜಿಲ್ಲಾಧಿಕಾರಿ ಎಂ.ಆರ್.ರವಿ ಖಚಿತಪಡಿಸಿದ್ದಾರೆ.

ಒಂದು ಕಾಲದಲ್ಲಿ ಶಾಪಗ್ರಸ್ಥ ಜಿಲ್ಲೆ ಎಂಬ ಅಪಕೀರ್ತಿಗೆ ಒಳಗಾಗಿದ್ದ ಚಾಮರಾಜನಗರ ಜಿಲ್ಲೆ ಇಂದು ದಕ್ಷಿಣ ಭಾರತದಲ್ಲೇ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿನ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಕ್ಕೆ ಖುದ್ದು ಪ್ರಧಾನಿ ನರೇಂದ್ರಮೋದಿಯೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Facebook Comments