ಗ್ರೀನ್ ಜೋನ್ ಚಾಮರಾಜನಗರಕ್ಕೂ ವಕ್ಕರಿಸಿದ ಕೊರೋನಾ..!
ಚಾಮರಾಜನಗರ, ಜೂ.9- ಇದುವರೆಗೂ ಹಸಿರು ವಲಯ ಎಂದೇ ಗುರುತಿಸಿಕೊಂಡಿದ್ದ ಚಾಮರಾಜನಗರಕ್ಕೂ ಕೊರೊನಾ ಮಹಾಮಾರಿ ವಕ್ಕರಿಸಿದೆ.
ಮಹಾರಾಷ್ಟ್ರದ ಪುಣೆಯಿಂದ ಹನೂರು ತಾಲ್ಲೂಕಿನ ಪಾಲಿಮೇಡ್ಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.
ನಾಲ್ಕು ದಿನಗಳ ಹಿಂದೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ತಮ್ಮ ತಾಯಿಯನ್ನು ನೋಡಲು ಪುಣೆಯಿಂದ ಬಂದಿದ್ದ. ಸ್ಥಳೀಯರಿಗೆ ವಿಷಯ ತಿಳಿದು ಕೂಡಲೇ ಜಿಲ್ಲಾಡಳಿತಕ್ಕೆ ಮಾಹಿತಿ ತಿಳಿಸಿದ್ದರು. ತಕ್ಷಣ ಅಧಿಕಾರಿಗಳು ವೈದ್ಯಕೀಯ ವಿದ್ಯಾರ್ಥಿಯನ್ನು 14 ದಿನಗಳ ಕ್ವಾರಂಟೈನ್ಗೆ ಒಳಪಡಿಸಿತ್ತು.
ಮೊನ್ನೆ ಆತನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ನಂತರ ಚಾಮರಾಜನಗರದ ನಿಗದಿತ ಆಸ್ಪತ್ರೆಗೆ ಕರೆದೊಯ್ದು ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ವೈದ್ಯಕೀಯ ವಿದ್ಯಾರ್ಥಿಗೆ ಸೋಂಕು ತಗುಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಆತನ ತಾಯಿ ಮತ್ತು ಸಹೋದರರ ತಪಾಸಣೆ ನಡೆಸಿದಾಗ ಇಬ್ಬರ ವರದಿಗಳು ನೆಗೆಟಿವ್ ಬಂದಿವೆ.
ವೈದ್ಯಕೀಯ ವಿದ್ಯಾರ್ಥಿಗೆ ಸೋಂಕು ತಗುಲಿರುವುದರಿಂದ ಆತನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಆತನೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕವಿರಿಸಿಕೊಂಡಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ ಕ್ವಾರಂಟೈನ್ಗೆ ಒಳಪಡಿಸಲು ಮುಂದಾಗಿದ್ದಾರೆ.