ಚಾಮರಾಜನಗರ ದುರಂತ : ತಲಾ 10ಲಕ್ಷ ರೂ.ಪರಿಹಾರಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 4- ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ದೊರೆಯದೇ ಸಾವಿಗೀಡಾದವರ ಕುಟುಂಬಗಳಿಗೆ ತಕ್ಷಣವೇ, ರಾಜ್ಯ ಸರ್ಕಾರ ತಲಾ 10 ಲಕ್ಷ ರೂ. ಗಳ ಪರಿಹಾರವನ್ನು ನೀಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ದೊರೆಯದೇ 24 ಸಾವುಗಳು ಸಂಭವಿಸಿವೆಯೆಂಬ ಅಘಾತಕಾರಿ ವರದಿ ಬಂದಿದ್ದು, ಇದು ಸರಕಾರದ ದಿವ್ಯ ನಿರ್ಲಕ್ಷ್ಯ ಮತ್ತು ದುರಾಡಳಿತದ ಫಲವಾಗಿದೆಯೆಂದು ಸಿಪಿಐಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು. ಬಸವರಾಜ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ಇದರಿಂದಾಗಿ ಅಮಾಯಕ ಪ್ರಜೆಗಳು ಸಾವಿಗೀಡಾಗಬೇಕಾಯಿತು. ಆ ಕುಟುಂಬಗಳು ತೀವ್ರ ದುಃಖವನ್ನು ಅನುಭವಿಸ ಬೇಕಾಗಿ ಬಂದಿತು. ಈ ಸಾವುಗಳಿಗೆ ಸರಕಾರವೇ ನೇರ ಹೊಣೆ ಎಂದು ಅವರು ತಿಳಿಸಿದ್ದಾರೆ. ಉನ್ನತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸರಕಾರ ಹೇಳಿರುವುದು ತನ್ನ ಹೊಣೆಗಾರಿಕೆಯನ್ನು ಮುಚ್ಚಿಟ್ಟು ಕೊಳ್ಳುವ ತಂತ್ರವಾಗಿದೆ.

ತಕ್ಷಣವೇ, ಈ ಪ್ರಕರಣವನ್ನು ಸ್ವತಂತ್ರವಾದ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಲು ಮತ್ತು ಆ ಮೂಲಕ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ಅಗತ್ಯ ಕ್ರಮ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin