ಸಂಪ್ರದಾಯದಂತೆ ನೆರವೇರಿದ ಚಾಮುಂಡೇಶ್ವರಿ ವರ್ಧಂತ್ಯೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.13- ಚಾಮುಂಡಿ ಬೆಟ್ಟದಲ್ಲಿ ಇಂದು ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ವರ್ಧಂತ್ಯೋತ್ಸವ ನೆರವೇರಿತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇವಿ ವರ್ಧಂತ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಹಾಗಾಗಿ ದೇವಾಲಯದ ಪ್ರಾಕಾರದಲ್ಲಿಯೇ ಉತ್ಸವ ನಡೆಯಿತು.

ದೇವಿಯ ವರ್ಧಂತ್ಯೋತ್ಸವದಲ್ಲಿ ಪತ್ನಿ ರಿಷಿಕಾ ಕುಮಾರಿ ಜತೆ ರಾಜವಂಶಸ್ಥ ಯದುವೀರ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವರ್ಧಂತ್ಯೋತ್ಸವವನ್ನು ಭಕ್ತಾದಿಗಳಿಲ್ಲದೆ ಆಚರಿಸಲಾಗಿದೆ. ಕೊರೊನಾ ಮುನ್ನೆಚ್ಚರಿಕೆಯಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದರು.

ಸಂಪ್ರದಾಯದಂತೆ ದೇವಿಯ ವರ್ಧಂತ್ಯೋತ್ಸವ ವಿಧಿ-ವಿಧಾನಗಳೊಂದಿಗೆ ನಡೆಯಲಿದ್ದು, ದೇವಿಯ ಆಶೀರ್ವಾದ ಎಲ್ಲರ ಮೇಲಿರಲಿ. ಜನರು ಕೊರೊನಾದಿಂದ ಸುಧಾರಣೆ ಕಾರಣಲಿ ಎಂದರು.

ನಮ್ಮೆರಡು ಪೀಳಿಗೆ ಈ ರೀತಿ ಕಷ್ಟ ಅನುಭವಿಸಲಿಲ್ಲ. ಈಗ ಕಷ್ಟ ಬಂದಿದೆ. ನಾವೆಲ್ಲರೂ ಸೇರಿ ಎದುರಿಸಬೇಕಿದೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸುವ ಮೂಲಕ ಕೊರೊನಾ ದೂರ ಮಾಡೋಣ ಎಂದರು.

ದೇವಾಲಯದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಪ್ರತಿ ವರ್ಷದಂತೆ ಆಷಾಢ ಮಾಸದ ಕೃಷ್ಣ ಪಕ್ಷ ಸಪ್ತಮಿ ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ದೇವಿ ವರ್ಧಂತ್ಯೋತ್ಸವ ನಡೆಯುತ್ತದೆ. ಅದರಂತೆ ಇಂದು ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.

ದೇವಿಗೆ ಬೆಳಗ್ಗೆಯೇ ಅಭ್ಯಂಜನ, ಅಲಂಕಾರ, ಅಷೋತ್ತರ, ಸಹಸ್ರನಾಮ ನೆರವೇರಿಸಿ ದೇವಾಲಯದ ಆವರಣದಲ್ಲೇ ಉತ್ಸವ ನೆರವೇರಿಸಲಾಯಿತು ಎಂದರು.

Facebook Comments

Sri Raghav

Admin