ವಿಜೃಂಭಣೆಯಿಂದ ನೆರವೇರಿದ ನಾಡ ದೇವತೆ ಚಾಮುಂಡೇಶ್ವರಿ ವರ್ಧಂತೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜು.24-ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತೋತ್ಸವ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಇಂದು ಮುಂಜಾನೆ 5 ಗಂಟೆ ಸಮಯದಲ್ಲಿ ದೇವಿ ಚಾಮುಂಡೇಶ್ವರಿಗೆ ದೇವಿಕೆರೆಯಿಂದ ಜಲ ತಂದು ಅಭಿಷೇಕ ಮಾಡಲಾಯಿತು. ನಂತರ ಪಂಚಾಮೃತಾಭಿಷೇಕ, ರುದ್ರಾಭಿಷೇಕ ನೆರವೇರಿಸಿ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು.

8 ಗಂಟೆ ನಂತರ ದೇವಿ ದರ್ಶನ ಪಡೆಯಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿಕೊಡಲಾಯಿತು. 9.30ಕ್ಕೆ ಮಹಾ ಮಂಗಳಾರತಿ ನೆರವೇರಿತು. ನಂತರ 10.30ಕ್ಕೆ ವಿವಿಧ ಹೂಗಳಿಂದ ಅಲಂಕೃತಗೊಂಡ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಹೊರ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆ ವೇಳೆ ಮಂಗಳವಾದ್ಯ, ಪೊಲೀಸ್ ಬ್ಯಾಂಡ್, ಅರಮನೆಯ ಬಿರುದು-ಬಾವಲಿ ಸೇರಿದಂತೆ ಇನ್ನಿತರ ಕಲಾತಂಡಗಳೊಂದಿಗೆ ದೇವಿಯ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.  ದೇವಿಗೆ ರಾಜವಂಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡೇಶ್ವರಿ ವರ್ಧಂತೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಲು ಉಚಿತ ಬಸ್ ಹಾಗೂ ವಿಶೇಷ ದರ್ಶನ ವ್ಯವಸ್ಥೆಯನ್ನು ಭಕ್ತಾದಿಗಳಿಗೆ ಕಲ್ಪಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬೆಟ್ಟದಾದ್ಯಂತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ವರ್ಷ ಆಷಾಢ ಮಾಸದ ಕೃಷ್ಣಪಕ್ಷ ಸಪ್ತಮಿ, ರೇವತಿ ನಕ್ಷತ್ರದಂದು ಚಾಮುಂಡೇಶ್ವರಿ ದೇವಿಯ ಜನ್ಮದಿನೋತ್ಸವ ನಡೆಯಲಿದೆ.

ಇಂದು ರಾತ್ರಿ 8.30ಕ್ಕೆ ಚಾಮುಂಡೇಶ್ವರಿ ದೇವಿಯ ಉತ್ಸವ, ಫಲ ಪೂಜೆ, ದರ್ಬಾರೋತ್ಸವ ಹಾಗೂ ಮಂಟಫೋತ್ಸವ ನೆರವೇರಲಿದ್ದು, ರಾತ್ರಿ 10 ಗಂಟೆವರೆಗೂ ಭಕ್ತಾದಿಗಳಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ