ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಜೆಸಿಬಿಗಳ ಘರ್ಜನೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.12- ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ ಇಂದು ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜಿಸಿದವು.  ಚಾಮುಂಡಿ ಬೆಟ್ಟದ ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೂ ಇಕ್ಕಟ್ಟಿನ ಜಾಗದಲ್ಲಿ ಅಂಗಡಿಗಳು ನಾಯಿಕೊಡೆಗಳಂತೆ ತೆರೆಯುತ್ತಿದ್ದವು. ಇದರಿಂದ ಪ್ರವಾಸಿಗರು ದೇವಸ್ಥಾನಕ್ಕೆ ಬರಲು ಅಡಚಣೆಯಾಗುತ್ತಿತ್ತು.

ಇದನ್ನು ಮನಗಂಡು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಅಂಗಡಿಗಳನ್ನು ತೆರವುಗೊಳಿಸಲು ಸತತ ಪ್ರಯತ್ನ ನಡೆಸುತ್ತಲೇ ಬಂದಿದ್ದವು. ಆದರೆ, ಇದಾವುದಕ್ಕೂ ಅಂಗಡಿಗಳವರು ಕ್ಯಾರೆ ಎನ್ನುತ್ತಿರಲಿಲ್ಲ. ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರವಾಸಿಗರ ಹಿತದೃಷ್ಟಿಯಿಂದ ಅಂಗಡಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು. ಹಾಗಾಗಿ ಅಂಗಡಿ ಮಾಲೀಕರಿಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿತ್ತು.

ಅಲ್ಲದೆ, ಹೊಸದಾಗಿ ನಿರ್ಮಿಸಲಾಗಿರುವ ಹೊಸ ಕಟ್ಟಡದ ಬಳಿ ವಿಶಾಲ ಜಾಗವನ್ನು ಕೊಡಲಾಗುವುದು. ಇನ್ನು ಮುಂದೆ ಅಲ್ಲಿ ಅಂಗಡಿಗಳನ್ನು ಹಾಕಿಕೊಳ್ಳುವಂತೆ ಸೂಚಿಸಲಾಗಿತ್ತು.
ದಶಕಗಳಿಂದ ಇದೇ ಮಾರ್ಗದಲ್ಲಿ ವ್ಯಾಪಾರ ನಡೆಸಿಕೊಂಡು ಬಂದಿರುವ ನಾವು ಹೊಸ ಜಾಗಕ್ಕೆ ಹೋದರೆ ವ್ಯಾಪಾರಕ್ಕೆ ಅಡೆತಡೆಯಾಗುತ್ತದೆ. ಇದನ್ನೇ ನಂಬಿರುವ ನಮ್ಮ ಬದುಕು ದುಸ್ತರವಾಗುತ್ತದೆ ಎಂದು ಮಾಲೀಕರು ಹೇಳುತ್ತ ಬಂದಿದ್ದರು.

ಆದರೆ, ವಿ.ಸೋಮಣ್ಣ ಅವರು ಇದಾವುದಕ್ಕೂ ಬಗ್ಗದೆ ಯಾವುದೇ ರಾಜಕೀಯಕ್ಕೂ ಮಣಿಯದೆ ಅಂಗಡಿಗಳ ತೆರವಿಗೆ ಆದೇಶಿಸಿದ್ದಾರೆ. ಸಚಿವರ ಸೂಚನೆ ಮೇರೆಗೆ ಇಂದು ಬೆಳ್ಳಂಬೆಳಗ್ಗೆ ಐದು ಜೆಸಿಬಿಗಳ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಪಾದಚಾರಿ ಮಾರ್ಗ ಹಾಗೂ ಸರ್ಕಾರಿ ಜಾಗದಲ್ಲಿ ತಲೆ ಎತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಕೈಗೊಳ್ಳಲಾಯಿತು.

ದಕ್ಷಿಣ ಭಾರತದಲ್ಲಿ ಉಗ್ರರ ಕರಿನೆರಳು ಭೀತಿ ಹಿನ್ನೆಲೆಯಲ್ಲಿ ಬೆಟ್ಟದ ಅಂಗಡಿ ಸಾಲುಗಳಲ್ಲಿ ಉಗ್ರರು ಅಡಗಿ ಏನಾದರೂ ಅವಗಢ ಉಂಟುಮಾಡಬಾರದೆಂಬ ಹಿನ್ನೆಲೆಯಲ್ಲಿ ರಸ್ತೆಯ ಎರಡೂ ಬದಿ ದಟ್ಟವಾಗಿ ಆವರಿಸಿಕೊಂಡಿದ್ದ ಸುಮಾರು 250ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಲಾಯಿತು.  ದೇವಾಲಯದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ಅಂಗಡಿ, ಹೊಟೇಲ್ ತಲೆ ಎತ್ತದಂತೆ ನೋಡಿಕೊಳ್ಳಲಾಗುವುದು ಎಂದು ಈ ವೇಳೆ ತಹಸೀಲ್ದಾರ್ ರಮೇಶ್‍ಬಾಬು ಸ್ಪಷ್ಟಪಡಿಸಿದರು.

ದೇವಾಲಯದ ಸಮೀಪ ಕೆಲವು ಹೊಟೇಲ್‍ಗಳು ತಲೆ ಎತ್ತಿದ್ದವು. ಬೆಟ್ಟಕ್ಕೆ ಬಂದವರು ರಸ್ತೆಯಲ್ಲೇ ತಿಂದು ಅಲ್ಲಲ್ಲೇ ಕೈ ತೊಳೆಯುವುದರಿಂದ ಇತರೆ ಭಕ್ತರಿಗೆ ಇದನ್ನು ದಾಟಿ ಹೋಗುವುದಕ್ಕೆ ಮುಜುಗರವಾಗುತ್ತಿತ್ತು.  ಇದನ್ನೆಲ್ಲ ಗಮನಿಸಿರುವ ಜಿಲ್ಲಾಡಳಿತ ಮೊದಲು ಹೊಟೇಲ್‍ಗಳನ್ನು ತೆರವುಗೊಳಿಸಲು ಮುಂದಾಯಿತು.

ಈ ಬಾರಿ ದಸರಾದಲ್ಲಿ ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಾಮುಂಡಿ ಬೆಟ್ಟದಲ್ಲೇ ದಸರಾ ಉದ್ಘಾಟನೆ ನಡೆಯುವುದರಿಂದ ಸಣ್ಣಪುಟ್ಟ ಗೂಡಂಗಡಿಗಳು, ಪಾದಚಾರಿ ಮಾರ್ಗದಲ್ಲಿ ಅಂಗಡಿಗಳು ಸೇರಿದಂತೆ ಎಲ್ಲವನ್ನೂ ಜೆಸಿಬಿ ಮೂಲಕ ತೆರವುಗೊಳಿಸುತ್ತಿದ್ದೇವೆ ಎಂದು ತಹಸೀಲ್ದಾರ್ ತಿಳಿಸಿದರು.  ಬೆಟ್ಟದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Facebook Comments