ಕಡೆ ಆಷಾಢ ಶುಕ್ರವಾರ, ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.26- ಇಂದು ಕಡೆ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.ಬೆಳಗಿನ ಚುಮುಚುಮು ಚಳಿ ಹಾಗೂ ಜಿಟಿಜಿಟಿ ಮಳೆ ನಡುವೆಯೂ ಭಕ್ತಾದಿಗಳು ನಾಡ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.

ಬೆಳಗ್ಗೆ 4 ಗಂಟೆಗೆ ದೇವಿಕೆರೆಯಿಂದ ಜಲ ತಂದು ದೇವಿಗೆ ಅಭಿಷೇಕ ಮಾಡಿ ನಂತರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ದೇವಿಗೆ ಹಸಿದು ಬಣ್ಣದ ರೇಷ್ಮೆಸೀರೆ ತೊಡಿಸಿ ಆಭರಣಗಳಿಂದ ಅಲಂಕಾರ ಮಾಡಿ ಕುಂಕುಮಾರ್ಚನೆ ನೆರವೇರಿಸಲಾಯಿತು. ತ್ರಿಶತಿ, ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ಬೆಳಗ್ಗೆ 4ಗಂಟೆಯಿಂದಲೇ ದೇವಿ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಇನ್ನೂ ಕೆಲವರು 1001 ಮೆಟ್ಟಿಲುಗಳನ್ನು ಹತ್ತಿ ತಮ್ಮ ಹರಕೆಗಳನ್ನು ತೀರಿಸಿದರು. ಮಹಿಳೆಯರು ಒಂದೊಂದು ಮೆಟ್ಟಿಲಿಗೂ ಅರಿಶಿಣ, ಕುಂಕಮ ಹಚ್ಚಿಕೊಂಡು ಮೆಟ್ಟಿಲು ಹತ್ತಿ ಪೂಜೆ ಸಲ್ಲಿಸಿದರು.

ಹಾಗೆಯೇ ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬ ಮಹಿಳೆಯರಿಗೂ ಅರಿಶಿಣ, ಕುಂಕಮ ಹಾಗೂ ಬಳೆಗಳನ್ನು ಭಕ್ತಾದಿಗಳು ನೀಡುತ್ತಿದ್ದರೆ. ಕೆಲವರು ಹುಳಿಯನ್ನ, ಮೊಸರನ್ನ, ಪುಳಿಯೋಗರೆ, ಸಿಹಿ ತಿನಿಸುಗಳನ್ನು ಪ್ರಸಾದವಾಗಿ ವಿತರಿಸಿದರು.

ಇಂದು ಸಹ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿತ್ತು. ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುಂಜಾಗೃತೆ ಕ್ರಮವಾಗಿ ಬೆಟ್ಟಕ್ಕೆ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Facebook Comments