ಯುವದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿಗೆ ನೋಟೀಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು , ಅ.5-ರ್ಯಾಪ್ ಸ್ಟಾರ್ ಚಂದನ್‍ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಅವರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣವೇ ಚಂದನ್‍ಶೆಟ್ಟಿಗೆ ನೋಟೀಸ್ ಜಾರಿ ಮಾಡಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಚಂದನ್‍ಶೆಟ್ಟಿ ನಿನ್ನೆ ಯುವ ದಸರಾದಲ್ಲಿ ನಡೆದುಕೊಂಡ ರೀತಿ ಅಕ್ಷಮ್ಯ ಅಪರಾಧ. ಇದು ನಾಡಹಬ್ಬ ಚಾಮುಂಡೇಶ್ವರಿ ಉತ್ಸವ. ಇಂತಹ ವೇದಿಕೆಯನ್ನು ಚಂದನ್‍ಶೆಟ್ಟಿ ಖಾಸಗಿ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದು, ಕಾನೂನು ಬಾಹಿರ, ಈ ರೀತಿ ನಡೆದುಕೊಳ್ಳಬಾರದಿತ್ತು ಎಂದರು. ನಾನು ಯುವ ದಸರಾ ಕಾರ್ಯಕ್ರಮವನ್ನು 10.05 ರವರೆಗೆ ನೋಡುತ್ತಿದ್ದೆ.

ಅನಂತರ ಅರಮನೆಯಲ್ಲಿ ವಿಕಲಚೇತನ ಮಕ್ಕಳ ಉತ್ತಮ ಕಾರ್ಯಕ್ರಮವಿದೆ ಎಂಬ ಮಾಹಿತಿ ಬಂದಾಗ ಅಲ್ಲಿಗೆ ತೆರಳಿದ್ದೆ. ಅದಕ್ಕೂ ಮುನ್ನ ನನ್ನ ಸಮೀಪದಲ್ಲಿಯೇ ಇದ್ದ ಚಂದನ್‍ಶೆಟ್ಟಿ ತಂದೆ -ತಾಯಿ ನನ್ನ ಬಳಿಯೇ ಕುಳಿತಿದ್ದರು. ಆ ವೇಳೆ ನನ್ನ ಮಗನ ಕಾರ್ಯಕ್ರಮವಿದೆ ನೋಡಿಕೊಂಡು ಹೋಗಿ ಎಂದು ಸಹ ಹೇಳಿದ್ದರು. ನಾನು ಅವರಿಗೆ ಮತ್ತೆ ಬರುತ್ತೇನೆ ಎಂದು ತಿಳಿಸಿ ತೆರಳಿದ್ದೆ.

ನಾನು ಇರುವವರೆಗೂ ಯಾವುದೇ ರೀತಿಯ ಸಮಸ್ಯೆ ಅಥವಾ ಗೊಂದಲ ಉಂಟಾಗಿರಲಿಲ್ಲ. ನಾನು ಹೋದ ಮೇಲೆ ಈ ಘಟನೆ ನಡೆದಿದೆ. ಚಂದನ್‍ಶೆಟ್ಟಿ ನನ್ನ ಕ್ಷೇತ್ರದ ವಾಸಿ. ಅವರು ಈ ರೀತಿ ನಡೆದುಕೊಂಡಿದ್ದು ಅದರಲ್ಲೂ ತಮ್ಮ ಪರಿಚಯಸ್ಥರೇ ಈ ರೀತಿ ನಡೆದುಕೊಂಡಿದ್ದು ತೀವ್ರ ನೋವುಂಟು ಮಾಡಿದೆ ಎಂದು ತಿಳಿಸಿದರು.

ಈ ಬಾರಿ ದಸರಾದಲ್ಲಿ ಕಾರ್ಯಕ್ರಮ ನೀಡಿದವರಿಗೆ ಯಾವುದೇ ತೊಂದರೆಯಾಗದಿರಲೆಂದು ಕಾರ್ಯಕ್ರಮ ಮುಗಿದ ಕೂಡಲೇ ಅವರಿಗೆ ಸೇರಬೇಕಾದ ಹಣವನ್ನು ನೀಡುವ ವ್ಯವಸ್ಥೆ ಮಾಡಿದ್ದೇನೆ. ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ಚಂದನ್‍ಶೆಟ್ಟಿ ಈ ರೀತಿ ಮಾಡಿದ್ದು ಅಕ್ಷಮ್ಯ ಅಪರಾಧ. ಯಾರು ಕ್ಷಮಿಸಲಾರದಂತಹ ತಪ್ಪನ್ನು ಮಾಡಿದ್ದಾನೆ. ಚಾಮುಂಡೇಶ್ವರಿ ಉತ್ಸವದಲ್ಲಿ ಈ ರೀತಿ ಮಾಡಿರುವುದರಿಂದ ಇನ್ನಾರು ತಿಂಗಳಲ್ಲಿ ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದರು.

 

Facebook Comments