ನಟಿ ಚಂದನ ಆತ್ಮಹತ್ಯೆ ಪ್ರಕರಣ : ತಲೆ ಮರೆಸಿಕೊಂಡಿದ್ದ ಪ್ರಿಯಕರ ದಿನೇಶ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ಆ್ಯಂಕರ್/ನಟಿ ಚಂದನ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಆಕೆಯ ಪ್ರಿಯಕರ ದಿನೇಶ್‍ನನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾದ ದಿನೇಶ್ ಮೂಲತಃ ಹಾಸನ ಜಿಲ್ಲೆಯವನು. ನಗರದಲ್ಲಿ ಖಾಸಗಿ ಕಂಪೆನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಕಳೆದ ಐದು ವರ್ಷಗಳಿಂದ ಆ್ಯಂಕರ್ ಚಂದನ ಅವರನ್ನು ಆರೋಪಿ ದಿನೇಶ್ ಪ್ರೀತಿಸಿದ್ದ, ಸಲುಗೆಯಿಂದ ಇದ್ದ. ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದ. ಅಲ್ಲದೆ, ಆಕೆಯಿಂದ ಐದು 5 ಲಕ್ಷ ರೂ. ಹಣ ಪಡೆದು ವಾಪಸ್ ಕೊಡದೆ ಸತಾಯಿಸುತ್ತಿದ್ದ.

ಇದೆಲ್ಲದರಿಂದ ಮನನೊಂದು ಚಂದನಾ ಮೇ 28ರಂದು ವಿಷ ಸೇವಿಸಿ ವಿಡಿಯೋ ಮಾಡಿದ್ದರು. ಅಕ್ಕಪಕ್ಕದ ಮನೆಯವರು ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ವಿಷಯ ತಿಳಿದು ಆಸ್ಪತ್ರೆಗೂ ಬಂದಿದ್ದ ದಿನೇಶ್ ಆಕೆಯ ಪರಿಸ್ಥಿತಿ ನೋಡಿ ಅಲ್ಲಿಂದ ಪರಾರಿಯಾಗಿದ್ದ. ಚಿಕಿತ್ಸೆ ಫಲಿಸದೆ ಚಂದನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಚಂದನ ಮನೆಯವರು ನೀಡಿದ ದೂರಿನ ಮೇರೆಗೆ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ದಿನೇಶ್ ಸೇರಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು. ಇದೀಗ ದಿನೇಶ್‍ನನ್ನು ಬಂಧಿಸಿರುವ ಪೊಲೀಸರು ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments