ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ಗೆ ಕಾನೂನು ಸಂಕಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.5- ಶಿವರಾಮ ಕಾರಂತರ ಬಡಾವಣೆ ವಿಷಯದಲ್ಲಿ ಗೊಂದಲ ಮೂಡಿಸುತ್ತಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಹೇಳಿದ್ದು, ಬಡಾವಣೆಯಲ್ಲಿ ಅನುಮತಿ ಪಡೆದು ನಿರ್ಮಾಣಗೊಂಡಿ ರುವ ಮನೆಗಳ ಮಾಲೀಕರು ಇದೇ ತಿಂಗಳ 30ರೊಳಗೆ ದಾಖಲಾತಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ರಾಜ್ಯ ಸರ್ಕಾರ 2008ರ ಡಿಸೆಂಬರ್ 30ರಂದು ಶಿವರಾಂ ಕಾರಂತರ ಬಡಾವಣೆ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿತ್ತು. ಹೈಕೋರ್ಟ್ ಈ ಅಧಿಸೂಚನೆಯನ್ನು 2014ರ ನವೆಂಬರ್ 20ರಂದು ರದ್ದು ಮಾಡಿತ್ತು. ಬಿಡಿಎ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದಾಗ ವಿಚಾರಣೆ ನಡೆದು ಹೈಕೋರ್ಟ್‍ನ ತೀರ್ಪನ್ನು 2018ರ ಆಗಸ್ಟ್ 3ರಂದು ರದ್ದು ಗೊಳಿಸಲಾಗಿದೆ.

2014 ಮತ್ತು 2018ರ ನಡುವೆ ಬಡಾವಣೆಯಲ್ಲಿ ಅನುಮತಿ ಪಡೆದು ಮನೆ ನಿರ್ಮಿಸಿಕೊಂಡಿರುವವರ ಹಿತರಕ್ಷಣೆ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಸುಪ್ರೀಂಕೋರ್ಟ್ ಯಾರೆಲ್ಲಾ ಮನೆ ನಿರ್ಮಿಸಿಕೊಂಡಿದ್ದಾರೆ. ಸಂಬಂಧಿತ ಪ್ರಾಧಿಕಾರಗಳಿಂದ ಅನುಮತಿ ಪಡೆದಿದ್ದಾರೆಯೇ ಎಂಬ ಕುರಿತಂತೆ ಪ್ರತಿ ಪ್ರಕರಣದಲ್ಲೂ ಸಮಗ್ರ ಮಾಹಿತಿ ಪಡೆಯಲು ತಮ್ಮ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

ಸಮಿತಿಯಲ್ಲಿ ಬಿಡಿಎ ಆಯುಕ್ತರಾಗಿದ್ದ ಜೈಕರ್ ಜರಾಮ್, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ.ರಮೇಶ್ ಅವರು ಸದಸ್ಯರಾಗಿದ್ದಾರೆ. ಸಮಿತಿ ನಿವಾಸಿಗಳಿಂದ ಮಾಹಿತಿ ಕಲೆಹಾಕಲು 17 ಹಳ್ಳಿಗಳನ್ನು ಒಳಗೊಂಡಂತೆ ನಾಲ್ಕು ಹೆಲ್ಪ್ ಡೆಸ್ಕ್‍ಗಳನ್ನು ಆರಂಭಿಸಿದೆ. ಜತೆಗೆ ಪ್ರತ್ಯೇಕ ವೆಬ್‍ಸೈಟ್ ಮಾಡಿ ಆನ್‍ಲೈನ್‍ನಲ್ಲೂ ದಾಖಲಾತಿಗಳನ್ನು ಸಲ್ಲಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ.

ಪ್ರತಿ ತಿಂಗಳು ಸರಿಸುಮಾರು 4 ಸಾವಿರ ಮಂದಿ ದಾಖಲಾತಿ ಸಲ್ಲಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ, ಈವರೆಗೂ 350 ಮಂದಿ ಆನ್‍ಲೈನ್‍ನಲ್ಲಿ 1500 ಜನ ಹೆಲ್ಪ್ ಡೆಸ್ಕ್ ಸೇರಿ ಒಟ್ಟು 1850 ಮಂದಿ ಮಾತ್ರ ದಾಖಲಾತಿ ಸಲ್ಲಿಸಿದ್ದಾರೆ. ಇನ್ನು 6ಸಾವಿರ ಮಂದಿ ದಾಖಲಾತಿ ಸಲ್ಲಿಸಿಲ್ಲ. ಇದೇ ತಿಂಗಳ 30ರವರೆಗೆ ಮಾತ್ರ ದಾಖಲಾತಿಗಳನ್ನು ಸ್ವೀಕರಿಸಲಾಗುತ್ತದೆ. ಆನಂತರ ಹೆಲ್ಪ್ ಡೆಸ್ಕ್‍ಗಳನ್ನು ಮುಚ್ಚಲಾಗುತ್ತದೆ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾ.24ರಂದು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಳಿಕ ಶಿವರಾಂ ಕಾರಂತ್ ಬಡಾವಣೆ ಕೈ ಬಿಡಲು ಅಡ್ವೋಕೇಟ್ ಜನರಲ್ ಅವರ ಜತೆ ಚರ್ಚಿಸುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇವರ ಹಿಂಬಾಲಕರು ಬಡಾವಣೆಯಲ್ಲಿ ಫಲಕಗಳನ್ನು ಹಾಕಿ ಬಡಾವಣೆ ನಿರ್ಮಾಣ ಕೈ ಬಿಟ್ಟು ಮುಖ್ಯಮಂತ್ರಿಗಳಿಗೆ ಅಭಿನಂದನೆ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದಾಗಿ ಗೊಂದಲ ಉಂಟಾಗಿದೆ. ನಿವಾಸಿಗಳು ದಾಖಲಾತಿಗಳನ್ನು ಸಲ್ಲಿಸಲು ಹಿನ್ನಡೆಯಾಗಿದೆ. ತನ್ಮೂಲಕ ಸುಪ್ರೀಂಕೋರ್ಟ್‍ನ ಆದೇಶ ಪಾಲನೆಗೆ ಅಡಚಣೆಯಾಗಿದೆ.

ಸಮಿತಿ ಕೋಡಿಹಳ್ಳಿ ಅವರಿಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದ್ದು, ಅವಧಿ ಮುಗಿದರೂ ಅವರು ಉತ್ತರಿಸಲಿಲ್ಲ. ಹೀಗಾಗಿ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸುಪ್ರೀಂಕೋರ್ಟ್‍ಗೆ ವರದಿ ನೀಡಿದ್ದೇವೆ ಎಂದು ಹೇಳಿದರು. ಬಡಾವಣೆ ನಿರ್ಮಾಣವನ್ನು ಕೈ ಬಿಡುವುದಿಲ್ಲ ಎಂದು ಬಿಡಿಎ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ ಸ್ಪಷ್ಟವಾಗಿ ಹೇಳಿದ್ದಾರೆ.

ನಮಗಿರುವ ಮಾಹಿತಿ ಪ್ರಕಾರ ಶಿವರಾಂ ಕಾರಂತರ ಬಡಾವಣೆ ಮುಂದುವರೆಯಲಿದೆ. ಸಾರ್ವಜನಿಕರು ಗೊಂದಲಕ್ಕೊಳಗಾಗದೆ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. ನಿವೇಶನದಾರರ ಹಿತರಕ್ಷಣೆಗೂ ಗಮನ ಹರಿಸಿರುವ ಸುಪ್ರೀಂಕೋರ್ಟ್, ಅಂಜನಾಪುರ, ಬನಶಂಕರಿ, ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಿದ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂಕೋರ್ಟ್ ಸೂಚಿಸಿದೆ ಎಂದು ಅವರು ಹೇಳಿದರು.

Facebook Comments