ಚಂದ್ರಯಾನ್-2 ಸಕ್ಸಸ್, ಇಸ್ರೋ ಅಧ್ಯಕ್ಷ ಶಿವನ್ ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20- ಚಂದ್ರಯಾನ್-2 ನೌಕೆ ಚಂದಿರನ ಸನಿಹಕ್ಕೆ ಮತ್ತಷ್ಟು ಹತ್ತಿರ ಸರಿದಿರುವುದು ಭಾರತದ ಮಹತ್ವದ ಮೈಲಿಗಲ್ಲಾಗಿದೆ. ಚಂದ್ರನ ದಕ್ಷಿಣ ಧೃವ ತಲುಪುತ್ತಿರುವ ವಿಶ್ವದ ಮೊದಲ ಮೂನ್ ಮಿಷನ್ ಎಂಬ ಹೆಗ್ಗಳಿಕೆಗೆ ಚಂದ್ರಯಾನ್-2 ಪಾತ್ರವಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ ಕೆ.ಶಿವನ್ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ್-2 ಇಂದು ಬೆಳಗ್ಗೆ 9 ಗಂಟೆ 2 ನಿಮಿಷಕ್ಕೆ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಾಚರಣೆಯ ಮೊದಲ 30 ನಿಮಿಷಗಳು ಅತ್ಯಂತ ಒತ್ತಡ ಸೃಷ್ಟಿಸಿತ್ತು. ಆದರೆ ನಿಗದಿಯಂತೆ ಭೂಮಿ ಕಕ್ಷೆಯಿಂದ ಚಂದ್ರನ ಕಕ್ಷೆಗೆ ನೌಕೆ ಯಶಸ್ವಿಯಾಗಿ ಸ್ಥಳಾಂತರಗೊಂಡ ನಂತರ ನಮ್ಮ ಆತಂಕ ಉದ್ವೇಗ, ನಿರಾಳವಾಯಿತು ಎಂದು ಇಸ್ರೋ ಅಧ್ಯಕ್ಷರು ವಿವರಿಸಿದ್ದಾರೆ.

ಈ ಸಾಧನೆ ಮಾಡಿದ ನಾಲ್ಕನೆ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು.ಚಂದ್ರನ ನಿಗದಿತ ಕಕ್ಷೆಯನ್ನು ನೌಕೆಯು ಸುತ್ತಿ ಉರಿಯಲು ಇನ್ನೂ ನಾಲ್ಕು ಹಂತಗಳ ಕಾರ್ಯಾಚರಣೆ ನಡೆಯಬೇಕಿದೆ. ಇವು ಅತ್ಯಂತ ಕಠಿಣ ಸವಾಲಿನ ಕಾರ್ಯ. ಇದಕ್ಕಾಗಿ ಇಸ್ರೋ ಪೂರ್ವಭಾವಿಯಾಗಿ ಪರಿಪೂರ್ಣ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದರು.

ಸೆ.2ರಂದು ಜಿಮ್ ಲ್ಯಾಂಡರ್, ನೌಕೆಯಿಂದ ಬೇರ್ಪಡಲಿದೆ. ಅದೇ ದಿನ ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯಲಿದೆ. ಈ ಎರಡೂ ಮಹತ್ವದ ಕಾರ್ಯಾಚರಣೆ ಮೂಲಕ ಇದು ಚಂದ್ರನ ಕಕ್ಷೆಗೆ ಇನ್ನೊಂದು ಹಂತದಲ್ಲಿ ಸೇರ್ಪಡೆಯಾಗುತ್ತದೆ.ಸೆ.6ರಂದು ಮುಂದುವರೆದ ಕಾರ್ಯಾಚರಣೆಯಲ್ಲಿ ಲ್ಯಾಂಡರ್ ಶಶಾಂಕನಿಗೆ ಇನ್ನಷ್ಟು ಸಮೀಪ ಚಲಿಸಲಿದೆ. ಸೆ.7ರಂದು ಅಂತಿಮವಾಗಿ ಚಂದ್ರನ ಕಕ್ಷೆ ತಲುಪಲಿದೆ ಎಂದು ಅವರು ಹೇಳಿದರು.

ಕೊನೆ ದಿನದ ಕಾರ್ಯಾಚರಣೆಯಲ್ಲಿ ಈ ಕಾರ್ಯಾಚರಣೆ ವೀಕ್ಷಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ಪ್ರಧಾನಿ ಸಮ್ಮುಖದಲ್ಲಿ ಯಶಸ್ವಿ ಸಂಭ್ರಮಾಚರಣೆ ನಡೆಯಲಿದೆ ಎಂದು ಕೆ.ಶಿವನ್ ಹೇಳಿದರು.

Facebook Comments