ಇಸ್ರೋ ಸಂಪರ್ಕಕ್ಕೆ ಸಿಗದ ವಿಕ್ರಮ್ ಲ್ಯಾಂಡರ್, ಕಮರಿದ ಕಟ್ಟಕಡೆಯ ಆಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಭಾರತದ ಮಹತ್ವಾಕಾಂಕ್ಷಿಯ ಚಂದ್ರಯಾನ-2 ಯಶಸ್ಸಿನ ಕೊನೆಕ್ಷಣದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ- ಇಸ್ರೋದೊಂದಿಗೆ ಲಿಂಕ್ ಕಳೆದುಕೊಂಡ ವಿಕ್ರಮ್ ಲ್ಯಾಂಡರ್‍ನ ಜೊತೆ ಮರುಸಂಪರ್ಕ ಸಾಧಿಸಲು ಇಂದು ಕೊನೆದಿನದ ಗಡುವು ಆದರೆ ಈ ನೌಕೆಯೊಂದಿಗೆ ಸಂಪರ್ಕ ಹೊಂದುವ ಕಟ್ಟಕಡೆ ಭರವಸೆಯೂ ಕ್ಷೀಣಿಸ ತೊಡಗಿದೆ.

ಸೆ. 7ರಂದು ನಿನ್ನೇನು ಚಂದಿರನ ಮೇಲ್ಮೈ ಮೇಲೆ ಇಳಿಯಬೇಕೆಂಬುವಷ್ಟರಲ್ಲಿ ವಿಕ್ರಮ್ ಲ್ಯಾಂಡರ್ ಇಸ್ರೋ ಕಂಟ್ರೋಲ್ ರೂಮ್ ಜೊತೆ ಸಂಪರ್ಕ ಕಳೆದುಕೊಂಡಿತು. ಈ ಲ್ಯಾಂಡರ ಮತ್ತು ರೋವರ್ ಜೀವಿತಾವಧಿ 14 ದಿನಗಳು. ಇಂದು ವಿಕ್ರಮ್‍ನನ್ನು ಪತ್ತೆ ಮಾಡಲು ಸತತ 14 ದಿನಗಳಿಂದ ಹಗಲು-ರಾತ್ರಿ ಶ್ರಮಿಸಿದ ಇಸ್ರೋದ ಗಡುವು ಇಂದು ಮುಕ್ತಾಯಗೊಳ್ಳಲಿದೆ.

ಈ ಗಡುವು ಮುಗಿಯಲು ಇನ್ನು ಕೆಲವು ಗಂಟೆಗಳು ಮಾತ್ರ ಬಾಕಿಯಿದ್ದು, ಲ್ಯಾಂಡರ್ ಜೊತೆ ಮರು ಸಂಪರ್ಕ ಸಾಧಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರೊಂದಿಗೆ ವಿಕ್ರಮ್ ಜೊತೆ ಮತ್ತೆ ಲಿಂಕ್ ಆಗುವ ಕಟ್ಟಕಡೆಯ ಆಸೆ ಕಮರಿ ಹೋಗುತ್ತಿದೆ.

ವಿಕ್ರಮ್ ಲ್ಯಾಂಡರ್ ಒಳಗೆ ಇರುವ ಪ್ರಜ್ಞಾನ್ ರೋವರ್ ಸಹ ಇದೆ. ಇವೆರಡರ ಬಗ್ಗೆ ಈ ತನಕ ಯಾವುದೇ ಸುಳಿವು ಲಭಿಸಿಲ್ಲ, ಪ್ರತಿ ನಿಮಿಷ ಕಳೆದಂತೆ ವಿಕ್ರಮ್ ಮತ್ತು ಪ್ರಜ್ಞಾನ್ ಅವನತಿಯತ್ತ ಸಾಗುತ್ತಿದ್ದು, ಇವುಗಳ ಜೊತೆ ಸಂಪರ್ಕ ಸಾಧಿಸುವ ಕೊನೆ ಆಸೆಯೂ ಕಮರುತ್ತಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ವಿಷಾದದಿಂದ ನುಡಿದ್ದಾರೆ.

ವಿಕ್ರಮ್ ಲ್ಯಾಂಡರ್‍ನನ್ನು ಪತ್ತೆ ಮಾಡಲು ಇಸ್ರೋಗೆ ಸಾಥ್ ನೀಡಿದ್ದ ಅಮೆರಿಕಾದ ಅಂತರಿಕ್ಷ ಸಂಶೋಧನಾ ಸಂಸ್ಥೆ -ನಾಸಾ ನಡೆಸಿದ ಸರ್ವಪ್ರಯತ್ನಗಳು ಸಹ ವಿಫಲವಾಗಿದೆ. ಆದರೆ ಆರ್ಬಿಟರ್ ನಿರೀಕ್ಷೆಗಿಂತಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಚಂದ್ರನ ಸನಿಹ ನಿಗದಿತ ಕಕ್ಷೆಯಲ್ಲಿ ಪ್ರದಕ್ಷಣೆ ಹಾಕುತ್ತ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಅಲ್ಲದೆ ಇಸ್ರೋಗೆ ನಿಖರವಾದ ಮಾಹಿತಿ ನೀಡುತ್ತ ಆಗಾಗ ಯಶಸ್ವಿ ಸಂಪರ್ಕ ಸಾಧಿಸುತ್ತಿದೆ.
ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಸಹ ಕಕ್ಷಾಗಾರ (ಆರ್ಬಿಟರ್) ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ವಹಿಸಲಾದ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ಮಾಡುತ್ತಿವೆ.

ಇದರ ಒಳಗೆ ಇರುವ 8 ಅತ್ಯಂತ ಸೂಕ್ಷ್ಮ ಉಪಕರಣ ಮತು ಸಾಧನಗಳು ಅತ್ಯಂತ ಕರಾರುವಕ್ಕಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಇಸ್ರೋ ಕೈ ಬಿಟ್ಟಿದ್ದು, ನಮ್ಮ ಮುಂದಿನ ಆಧ್ಯತೆ ಗಗನಯಾನ ಎಂದು ಅವರು ತಿಳಿಸಿದರು.

Facebook Comments

Sri Raghav

Admin