ಇಸ್ರೋ ವಿಜ್ಞಾನಿಗಳ ಅಸಾಧಾರಣ ಕಾರ್ಯತತ್ಪರತೆ: ರಾಷ್ಟ್ರಪತಿ ಪ್ರಶಂಸೆ
ನವದೆಹಲಿ, ಸೆ.7-ಚಂದ್ರಯಾನ-2 ಮೂಲಕ ಭಾರತದ ಜಾಣ್ಮೆ ಮತ್ತು ದೃಢತೆಯನ್ನು ಇಡೀ ವಿಶ್ವದ ಮುಂದಿಟ್ಟಿರುವ ಇಸ್ರೋವನ್ನು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಕೊಂಡಾಡಿದ್ದಾರೆ. ಇಸ್ರೋ ಅವಿರತ ಪರಿಶ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರಪತಿಗಳು, ಚಂದ್ರಯಾನ-2 ಮೂಲಕ ಇಸ್ರೋದ ಇಡೀ ತಂಡ ತಮ್ಮ ಅಸಾಧಾರಣ ಕಾರ್ಯತತ್ಪರತೆ ಮತ್ತು ಧೈರ್ಯವನ್ನು ತೋರಿಸಿದೆ.
With #Chandrayaan2 Mission, the entire team of ISRO has shown exemplary commitment and courage. The country is proud of @ISRO. We all hope for the best #PresidentKovind
— President of India (@rashtrapatibhvn) September 6, 2019
ಈ ದೇಶ ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತದೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಚಂದ್ರನ ಅಂಗಳದ ಮೇಲೆ ಲ್ಯಾಂಡರ್ನ್ನು ಇಳಿಸುವ ಕೊನೆಯ 15 ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.
ಸಿಗ್ನಲ್ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ, ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿಮೀವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಘೋಷಣೆ ಮಾಡಿದರು.