ಆಟಿಕೆಗಳ ತವರೂರು ಚನ್ನಪಟ್ಟಣದ ನಿರ್ಲಕ್ಷ್ಯವೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಚೀನಾಗೆ ಸೆಡ್ಡು ಹೊಡೆಯಬೇಕೆಂಬ ಪರಿಕಲ್ಪನೆಯಲ್ಲಿ ಈಗ ಇಡೀ ದೇಶ ಒಂದಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸ್ವಾಭಿಮಾನ್ ಭಾರತ್ ಪರಿಕಲ್ಪನೆಯನ್ನು ತಿಳಿಸಿಕೊಟ್ಟು ಕರಕುಶಲ ಕರ್ಮಿಗಳು, ಗುಡಿ ಕೈಗಾರಿಕೆಗಳು ಹಾಗೂ ಸಂಶೋಧನೆಗಳಿಗೆ ಕರೆ ನೀಡಿದ್ದಾರೆ.

ಆದರೆ ರಾಜ್ಯದಲ್ಲಿ ನಡೆಯುತ್ತಿರುವುದು ಏನು? ಕೊರೊನಾ ಸಂಕಷ್ಟದ ನಡುವೆ ಇಂದು ಕೈಗಾರಿಕೆಗಳು ಸಂಪೂರ್ಣ ತಳಮಟ್ಟಕ್ಕೆ ತಳ್ಳಲ್ಪಟ್ಟು ಸಂಕಷ್ಟಕ್ಕೆ ಸಿಲುಕಿದೆ. ಇದನ್ನು ಅರಿಯಬೇಕಾದ ಅಧಿಕಾರಿಗಳು, ನಮ್ಮನ್ನಾಳುವ ಸರ್ಕಾರ ಹಾಗೂ ಸಚಿವರು ಮರೆತಿದ್ದಾರೆಯೇ ಎಂಬ ಭಾವನೆ ಮೂಡಲಾರಂಭಿಸುತ್ತಿದೆ.

ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡಬೇಕಾದರೆ ಒಂದು ಕೃಷಿ , ಮತ್ತೊಂದು ಹೈನುಗಾರಿಕೆ. ಇದರ ಜತೆಗೆ ಗುಡಿ ಕೈಗಾರಿಕೆಗಳು , ಕರಕುಶಲ ಸಣ್ಣ ಉದ್ಯಮಗಳು ಕೂಡ ಪ್ರಮುಖವಾದವು ಎಂಬುದನ್ನು ಯಾರೂ ಮರೆಯುವಂತಿಲ್ಲ. ವಿದೇಶಗಳಲ್ಲೂ ನಮ್ಮ ರಾಜ್ಯದ ಕರಕುಶಲ ವಸ್ತುಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತದೆ.

ಆದರೆ ವಿಪರ್ಯಾಸವೆಂದರೆ ಸರ್ಕಾರ ಸರಿಯಾದ ಪ್ರೋತ್ಸಾಹ ನೀಡದೆ ಅವೈಜ್ಞಾನಿಕ ನಿರ್ಧಾರಗಳು ಮತ್ತಷ್ಟು ದುಃಸ್ಥಿತಿಗೆ ತಳ್ಳುವ ಸಾಧ್ಯತೆಗಳು ಇದೆ. ನಮ್ಮ ರಾಜ್ಯದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಗೊಂಬೆಗಳ ನಾಡು ಎಂದೇ ಖ್ಯಾತಿ ಪಡೆದಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಇದರ ಬಗ್ಗೆ ಏನು ಚಿಂತನೆ ಮಾಡಿದೆ ಎಂಬುದೇ ತಿಳಿಯದಂತಾಗಿದೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚನ್ನಪಟ್ಟಣದ ಕರಕುಶಲ ಕರ್ಮಿಗಳ ಬಗ್ಗೆ ಮೆಚ್ಚುಗೆ ಮಾತನ್ನಾಡಿದರೆ ಇತ್ತ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್ (ಆಟಿಕೆ ಕಾರ್ಖಾನೆಗಳ ಪ್ರದೇಶ) ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ವಿಚಿತ್ರವೆಂದರೆ ಈಗ ಕೊಪ್ಪಳದಲ್ಲಿ ಎಸ್‍ಇಝಡ್‍ನಲ್ಲಿ ಆಟಿಕೆ ಉದ್ಯಮ ವಲಯವನ್ನು ಆರಂಭಿಸಿದರೆ ಯಾರು ಬಂಡವಾಳ ಹೂಡಲು ಬರುತ್ತಾರೆ. ಮತ್ತು ಇಲ್ಲಿಗೆ ಸಂಪರ್ಕದ ಮಾರ್ಗ , ವಿಮಾನ, ರೈಲು ನಿಲ್ದಾಣ ಸೇವೆ ಇತ್ಯಾದಿಗಳ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿದ್ದಾರೆಯೇ ಎಂಬುದು ಈಗ ಎಲ್ಲರ ಪ್ರಶ್ನೆಯಾಗಿದೆ.

ರಾಜಧಾನಿ ಹತ್ತಿರವೇ ಇರುವ ಚನ್ನಪಟ್ಟಣದಲ್ಲಿ ಈಗಲೂ ಸಹ ಸಾವಿರಾರು ಕರಕುಶಲ ಕರ್ಮಿಗಳು ಆಟಿಕೆಗಳನ್ನು ತಯಾರಿಸುತ್ತಿದ್ದಾರೆ. ಅವರನ್ನು ಮರೆತು ಈಗ ಉತ್ತರ ಕರ್ನಾಟಕ ಭಾಗಕ್ಕೆ ಹೋದರೆ ಇಲ್ಲಿರುವವರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡಿದೆ.

ಚನ್ನಪಟ್ಟಣದಲ್ಲಿರುವ ಕರಕುಶಲಕರ್ಮಿಗಳು ಕೊಪ್ಪಳಕ್ಕೆ ಬರುತ್ತಾರೆಯೇ ಅವರಿಗೆ ಮೂಲಭೂತ ಸೌಲಭ್ಯಗಳು ದೊರೆಯುತ್ತವೆಯೇ ಎಂಬುದರ ಬಗ್ಗೆ ಈಗ ವ್ಯಾಪಕ ಚರ್ಚೆಗಳು ಶುರುವಾಗಿದೆ. ರಾಜ್ಯ ಸರ್ಕಾರ ಹೊರ ರಾಜ್ಯದವರಿಗೆ ಮಣೆ ಹಾಕುವುದರಲ್ಲೇ ಚಿತ್ತ ಹರಿಸಿದೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ಚನ್ನಪಟ್ಟಣದ ಕೆಲ ಕರಕುಶಲಕರ್ಮಿಗಳು ಅಸಹನೆ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೆಲವೊಂದು ಶಾಲೆಗಳಿಗೆ ಆಟಿಕೆಗಳನ್ನು ಸರಬರಾಜು ಮಾಡುವ ಟೆಂಡರ್ ಅನ್ನು ಕೂಡ ನೆರೆ ರಾಜ್ಯದವರಿಗೆ ನೀಡಿದ್ದಾರೆ. ಹೀಗಿರುವಾಗ ನಮ್ಮ ರಾಜ್ಯದ ಕರಕುಶಲ ಕರ್ಮಿಗಳ ಬಗ್ಗೆ ಸರ್ಕಾರದ ಕಾಳಜಿ ಏನು? ಈ ಬಗ್ಗೆ ಅಧಿಕಾರಿಗಳು , ಮುಖ್ಯಮಂತ್ರಿಗಳ ದಿಕ್ಕು ತಪ್ಪಿಸುತ್ತಿದ್ದಾರೆಯೇ ಅಥವಾ ದೂರದೃಷ್ಟಿಯ ಆಲೋಚನೆ ಇಲ್ಲಿ ವ್ಯಕ್ತವಾಗಿಲ್ಲವೇ ಎಂಬ ಅನುಮಾನ ವ್ಯಕ್ತವಾಗಿದೆ.

Facebook Comments