ನಾಪತ್ತೆಯಾಗಿದ್ದ ಆಪ್ರಾಪ್ತ ವಿದ್ಯಾರ್ಥಿನಿ ಹೊಂಡದಲ್ಲಿ ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಆ.27- ಮನೆಯಿಂದ ಸ್ನೇಹಿತೆ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿ ನಾಪತ್ತೆಯಾಗಿದ್ದ ಆಪ್ರಾಪ್ತ ವಿದ್ಯಾರ್ಥಿನಿಯ ಶವ ತೆರೆದ ನೀರಿನ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಲಾಳಘಟ್ಟ ರಸ್ತೆಯ ಇಬ್ರಾಹಿಂ ಗ್ಯಾರೇಜ್ ಮುಂಭಾಗ ನಡೆದಿದೆ. ನೀರಿನ ಗುಂಡಿಯಲ್ಲಿ ಪತ್ತೆಯಾಗಿರುವ ಶವ ತಸ್ಮೀಯಾ ಭಾನು (11) ಎಂದು ಗುರುತಿಸಲಾಗಿದೆ.

ನಗರದ ಮೆಹದಿ ನಗರದ ಆಟೋ ಚಾಲಕ ಅಮ್ಜತ್‍ಖಾನ್ ಎಂಬುವರ ಮಗಳಾದ ಈಕೆ ಎರಡು ದಿನದ ಹಿಂದೆ ತನ್ನ ಸ್ನೇಹಿತೆ ಮನೆಗೆ ಹೋಗಿ ನಂತರ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೋದವಳು ನಾಪತ್ತೆಯಾಗಿದ್ದಳು. ರಾತ್ರಿಯಾದರೂ ಮಗಳು ಮನೆಗೆ ಬಾರದಿದ್ದರಿಂದ ದಿಗಿಲುಗೊಂಡ ಪೋಷಕರು ಸ್ನೇಹಿತೆ ಹಾಗೂ ಸಂಬಂಧಿಕರ ಮನೆಯಲ್ಲಿ ಆಕೆಗೆ ಹುಡುಕಾಟ ನಡೆಸಿ ಎಲ್ಲೂ ಕಾಣದಾದಾಗ ಆಪ್ರಾಪ್ತ ವಿದ್ಯಾರ್ಥಿನಿ ಕಾಣೆಯಾಗಿರುವುದರ ಬಗ್ಗೆ ಪೂರ್ವ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಮೆಹದಿನಗರದ ಬಳಿಯ ಲಾಳಘಟ್ಟ ರಸ್ತೆಯ ಇಬ್ರಾಹಿಂ ಗ್ಯಾರೇಜ್ ಮುಂಭಾಗದ ಗುಂಡಿಯಲ್ಲಿ ಆಕೆಯ ಶವ ತೇಲಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಆಕೆ ತನ್ನ ಸ್ನೇಹಿತೆ ಮನೆಗೆ ಹೋಗಿ ನಂತರ ಅಂಗಡಿಗೆ ಹೋದ ಸಂದರ್ಭದಲ್ಲಿ ಅರ್ಧ ತಾಸು ಭಾರಿ ಮಳೆಯಾಗಿತ್ತು. ಮಳೆ ಬಂದ ಸಂದರ್ಭದಲ್ಲಿ ಅಂಗಡಿಯ ಬಳಿ ನಿಂತಿದ್ದ ಆಕೆ ಮಳೆ ನಿಂತ ಮೇಲೆ ಮನೆ ಕಡೆ ಹೆಜ್ಜೆ ಹಾಕಿದ್ದಾಳೆ.

ಮನೆಗೆ ಬರುವ ರಸ್ತೆಯೆಲ್ಲ ನೀರು ತುಂಬಿದ್ದು, ಗ್ಯಾರೆಜ್ ಮುಂದೆ ತೆಗೆದಿದ್ದ ಗುಂಡಿ ಮುಚ್ಚಿದ್ದರಿಂದ ಯಾವುದು ರಸ್ತೆ, ಯಾವುದು ಗುಂಡಿ ಎಂದು ತಿಳಿಯದೆ ಇಂತಹ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರಕರಣದ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ನೀರಿನ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Facebook Comments