ಚಾರ್ಮುಡಿಘಾಟ್ನಲ್ಲಿ ಸಂಚಾರ ಪ್ರಾರಂಭ : ಸಾರ್ವಜನಿಕರಲ್ಲಿ ಸಂತಸ
ಚಿಕ್ಕಮಗಳೂರು, ಡಿ.28- ಚಾರ್ಮುಡಿ ಘಾಟ್ನಲ್ಲಿ ಕಳೆದ ಐದು ತಿಂಗಳಿನಿಂದ ಸ್ಥಗಿತವಾಗಿದ್ದ ಸಂಚಾರ ನಿರ್ಬಂಧ ಈಗ ತೆರವಾಗಿದ್ದು, ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಸಂತಸ ಉಂಟುಮಾಡಿದೆ. ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಚಾರ್ಮುಡಿಘಾಟ್ನಲ್ಲಿ ಕೆಎಸ್ಆರ್ಟಿಸಿ ಮಿನಿ ಬಸ್ ಸಂಚಾರ ಆರಂಭಿಸಿದ್ದು, ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಉಡುಪಿ ಕೆಎಸ್ಆರ್ಟಿಸಿ ಘಟಕದಿಂದ ಎರಡು ಮಿನಿ ಬಸ್ಗಳು ನಿನ್ನೆಯಿಂದ ಸಂಚಾರ ಆರಂಭಿಸಿವೆ. ಮಂಗಳೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆನಂದ್ ಉಡುಪಿಯಿಂದ ಎರಡು ಮಿನಿ ಬಸ್ಗಳು ಸಂಚಾರ ಆರಂಭಿಸಿದ್ದು, ಇಂದಿನಿಂದ ನಾಲ್ಕು ಮಿನಿ ಬಸ್ಗಳು ದಿನದ 24 ಗಂಟೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಚಾರ್ಮುಡಿ ಘಾಟ್ ಮೂಲಕ ಸಂಚರಿಸಲಿವೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ್ ಮಾತನಾಡಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಮಿನಿ ಬಸ್ಗಳು ಬರಲಿದ್ದು, ಇನ್ನೆರಡು ದಿನಗಳಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಮಿನಿ ಬಸ್ ಸಂಚಾರ ಆರಂಭಿಸಲಿದ್ದೇವೆ ಎಂದರು.
ಚಾರ್ಮುಡಿ ಘಾಟ್ ತಿರುವುಗಳಲ್ಲಿ ಪ್ರತಿಫಲಕ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ತಡೆಗೋಡೆಗಳಿಗೆ ಬಣ್ಣ ಬಳಿಯಲಾಗಿದ್ದು, ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.