ನಿರ್ಮಾಣ ಹಂತದ ಚೌಡೇಶ್ವರಿ ದೇವಾಲಯ ಕುಸಿತ

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜೂ.12- ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದಲ್ಲಿ ನಿರ್ಮಾಣ ಹಂತದ ದೇವಾಲಯ ಕುಸಿದು ಬಿದ್ದಿದೆ. ಗ್ರಾಮದ ಪ್ರಸಿದ್ದ ಶ್ರೀ ಚೌಡೇಶ್ವರಿ ದೇವಾಲಯವೇ ಕುಸಿದು ಬಿದ್ದಿರುವುದರಿಂದ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಆತಂಕ್ಕೊಳಗಾಗಿದ್ದಾರೆ.

ಸುಮಾರು 40 ಲಕ್ಷಕ್ಕೂ ಹೆಚ್ಚು ಮೌಲ್ಯದಲ್ಲಿ ಶ್ರೀ ಚೌಡೇಶ್ವರಿ ಬೃಹತ್ ದೇವಾಲಯದ ಗೋಪುರ ನಿರ್ಮಾಣವಾಗಿದ್ದು ಉಳಿದ ದೇವಾಲಯದ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸರಿರಾತ್ರಿ ದೇವಾಲಯದ ಮುಕುಟ ಗೋಪುರ ಕುಸಿದಿರುವುದರಿಂದ ಗ್ರಾಮದಲ್ಲಿ ಹಲವಾರು ರೀತಿಯ ಊಹಪೋಹಗಳು ಗರಿಗೆದರಿವೆ.

ಸುಮಾರು 2 ವರ್ಷದಿಂದ ದೇವಾಲಯದ ಕಾಮಗಾರಿ ನಡೆಯುತ್ತಿತ್ತು. ದೇವಾಲಯ ನಿರ್ಮಾಣ ಸಮಿತಿ ಆಯೋಜನೆ ಮಾಡಿಕೊಂಡು ಬಹಳ ಆಕರ್ಷಕವಾಗಿ ದೇವಾಲಯ ನಿರ್ಮಾಣ ಹಂತದಲ್ಲಿತ್ತು. ಕೆಲ ತಿಂಗಳಲ್ಲಿಯೇ ದೇವಾಲಯ ಪೂರ್ಣಗೊಂಡು ಭಕ್ತಾದಿಗಳಿಗೆ ಮುಕ್ತವಾಗುತ್ತಿತ್ತು.

ಆದರೆ ಕನಸಿನಲ್ಲಿಯೂ ಊಹಿಸಲಾಗದಂತಹ ರೀತಿಯಲ್ಲಿ ಗೋಪುರ ಕುಸಿದಿರುವುದು ಭಾರೀ ದುರಂತದ ವಿಚಾರವಾಗಿದ್ದು, ಅದೃಷ್ಟವಶಾತ್ ಕಟ್ಟಡ ಕಾರ್ಮಿಕರು ದೇವಾಲಯದಲ್ಲಿ ವಾಸ್ತವ್ಯವಿರದಿರುವುದು ಬಾರೀ ಅನಾಹುತ ತಪ್ಪಿದಂತಾಗಿದೆ.

Facebook Comments