ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

ಟಿ.ನರಸೀಪುರ, ಫೆ.14- ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಸುಮಾರು 10 ರಿಂದ 12 ವರ್ಷದ ಗಂಡು ಚಿರತೆ ಇಂದು ಮುಂಜಾನೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ತಾಲ್ಲೂಕಿನ ತುಂಬಲ ಗ್ರಾಮದ ಕಂಬದ ರಾಮನ ಬೆಟ್ಟದಲ್ಲಿರುವ ರಾಜಶೇಖರ್ ಎಂಬುವರಿಗೆ ಸೇರಿದ ಹಿಪ್ಪುನೇರಳೆ ತೋಟದಲ್ಲಿ ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದ ಹತ್ತು ದಿನಗಳ ಹಿಂದೆಯೇ ಬೋನ್ ಇರಿಸಿ ಕಾದು ಕುಳಿತಿದ್ದರು. ಚಿರತೆ ಬೋನಿಗೆ ಬಿದ್ದಿದೆ.ಕಳೆದ ಕೆಲವು ದಿನಗಳಿಂದಲೂ ಚಿರತೆ ಗ್ರಾಮದ ಆಸು-ಪಾಸಿನಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತಲ್ಲದೇ ಮನೆ ಮುಂದೆ ಕಟ್ಟಿಹಾಕುತ್ತಿದ್ದ ಮೇಕೆ ಮರಿಗಳನ್ನು ತಿಂದು ಹಾಕಿತ್ತು.

ಇದರಿಂದ ಭಯಭೀತರಾದ ಗ್ರಾಮಸ್ಥರು ಸ್ಥಳೀಯ ಪಂಚಾಯ್ತಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದು ಗ್ರಾಮಸ್ಥರ ಆತಂಕ ದೂರಮಾಡಿದ್ದಾರೆ. ಸೆರೆ ಸಿಕ್ಕ ಚಿರತೆಯನ್ನು ಗುಂಡ್ಲುಪೇಟೆ ಅರಣ್ಯಕ್ಕೆ ಬಿಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಗಿರೀಶ್, ಉಪ ಅರಣ್ಯಾಧಿಕಾರಿ ಎಸ್.ಎಂ.ಮಂಜುನಾಥ್, ಅರಣ್ಯ ರಕ್ಷಕರಾದ ಎಂ.ನಾಗರಾಜು, ಎನ್.ಚೇತನ್ ಸೇರಿದಂತೆ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Facebook Comments