ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ : ಚಲುವರಾಯಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸುವುದು ಸದ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತ ಮತ್ತು ಅಪ್ರಬುದ್ಧ ಎಂದು ಹೇಳಿರುವ ಮಾಜಿ ಸಚಿವ ಚಲುವರಾಯಸ್ವಾಮಿ , ಕಾಂಗ್ರೆಸ್‍ನಲ್ಲಿ ಯಾವುದೇ ಗುಂಪುಗಾರಿಕೆಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಕಳೆದ ಎರಡು ದಿನಗಳ ಹಿಂದೆ ತುಮಕೂರಿನಲ್ಲಿ ಭೇಟಿ ಮಾಡಿದ್ದು ನಿಜ.

ನಮ್ಮ ಭೇಟಿ ಕೇವಲ ಸೌಜನ್ಯದ ಮಾತುಕತೆ ಯಾಗಿತ್ತು. ಯಾವುದೇ ರಾಜಕೀಯ ಚರ್ಚೆ ನಡೆಯಲಿಲ್ಲ. ನಾವು ಅವರನ್ನು ಭೇಟಿಯಾಗಿ ಸುಮಾರು ಎರಡು ವರ್ಷಗಳಾಗಿತ್ತು. ಹಾಗಾಗಿ ಸೌಜನ್ಯಕ್ಕಾಗಿ ಭೇಟಿಯಾಗಿದ್ದೇವೆ. ಅದನ್ನೇ ನೆಪ ಮಾಡಿಕೊಂಡು ವದಂತಿಗಳನ್ನು ಹರಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಎಲ್ಲಿಯೂ ಮುಂದಿನ ಮುಖ್ಯಮಂತ್ರಿ ಕುರಿತು ಚರ್ಚೆಗಳು ನಡೆಯುತ್ತಿಲ್ಲ. ನಾಯಕರ ನಡುವೆ ಕೂಡ ಈ ರೀತಿಯ ಮಾತುಕತೆಗಳು ನಡೆಯುತ್ತಿಲ್ಲ. ಬಹಿರಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಕೆಲವರು ಅಭಿಮಾನಕ್ಕಾಗಿ ತಮ್ಮ ನಾಯಕರನ್ನು ಉಲ್ಲೇಖಿಸಿ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಿದ್ದಾರೆ. ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

ಚುನಾವಣೆ ಇನ್ನೂ ಎರಡು ವರ್ಷ ಇದೆ. ನಾವು ಪಕ್ಷವನ್ನು ಸಂಘಟಿಸಬೇಕು. 120 ಸ್ಥಾನಗಳನ್ನು ಗೆಲ್ಲಬೇಕು. ನಮಗೆ ಅಧಿಕಾರಬಂದ ಬಳಿಕ ಮುಖ್ಯಮಂತ್ರಿಯ ಕುರಿತು ಚರ್ಚೆ ಮಾಡುವುದು ಸೂಕ್ತ. ಸದ್ಯದ ಪರಿಸ್ಥಿತಿಯಲ್ಲಿ ಈ ಚರ್ಚೆಯ ಅಪ್ರಸ್ತುತ ಎಂದು ಹೇಳಿದರು.

ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರ ಆಪ್ತರನ್ನು ಕರೆಸಿಕೊಂಡು ಚರ್ಚೆ ಮಾಡುತ್ತಿದ್ದು, ಮುಂದೆ ಅಧಿಕಾರಕ್ಕೆ ಬಂದಾಗ ತಾವು ಸಿದ್ದರಾಮಯ್ಯ ಅವರ ಜತೆ ಕೈ ಜೋಡಿಸಲು ಸಿದ್ದ. 2018ರ ಕಹಿ ಘಟನೆಯನ್ನು ಮರೆತುಬಿಡುತ್ತೇನೆ ಎಂದು ಹೇಳಿದ್ದಾರೆ ಎಂಬ ವದಂತಿಗಳಿದ್ದವು. ಈ ಕುರಿತಂತೆ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದು, ಪರಮೇಶ್ವರ್ ಹಾಗೂ ನಮ್ಮ ನಡುವಿನ ಮಾತುಕತೆಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ ಎಂದು ತಿಳಿಸಿದ್ದಾರೆ.

Facebook Comments