ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸೋಟ, 9 ಕಾರ್ಮಿಕರ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ದಹೇಜ್ (ಗುಜರಾತ್), ಜೂ.4-ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ 9 ಕಾರ್ಮಿಕರು ಸಾವಿಗೀಡಾದ ದುರಂತ ಗುಜರಾತ್‍ನ ದಹೇಜ್ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಫೋಟದ ನಂತರ ಕಾಣಿಸಿಕೊಂಡ ರಾಸಾಯನಿಕ ಬೆಂಕಿ ವಿಷಯುಕ್ತವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲ ಪ್ರದೇಶಗಳು ಮತ್ತು ಸಮೀಪದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ನಿನ್ನೆ ಅಪರಾಹ್ನ ಕೃಷಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡಿತ್ತು. ಸುದ್ದಿ ತಿಳಿದ ಕೂಡಲೆ 10 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ವಾಹನಗಳೊಂದಿಗೆ ಧಾವಿಸಿ ಬಹು ಪ್ರಯಾಸದಿಂದ ಬೆಂಕಿಯನ್ನು ನಂದಿಸಿದರು.

ಕಾರ್ಖಾನೆಯಿಂದ ದಟ್ಟ ಬೆಂಕಿ ಮತ್ತು ಹೊಗೆ ಬಹು ದೂರದವರೆಗೆ ಕಾಣುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದುರ್ಘಟನೆಯಲ್ಲಿ ಒಂಭತ್ತು ಕಾರ್ಮಿಕರು ಮೃತಪಟ್ಟು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿಪುಲ್ ಗಾಗಿಯಾ ತಿಳಿಸಿದ್ದಾರೆ.

ಗಾಯಾಳುಗಳನ್ನು ಭರುಚ್‍ನ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಭರುಚ್ ಜಿಲ್ಲಾ ಕಲೆಕ್ಟರ್ ಎಂ.ಡಿ.ಮೋಡಿಯಾ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾರಿಕೆಯ ಸುತ್ತಮುತ್ತಲ ಸ್ಥಳಗಳು ಮತ್ತು ಹತ್ತಿರದ ಎರಡು ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಗೋಪಾಲಪುರಂನಲ್ಲಿ ಇತ್ತೀಚೆಗೆ ಎಲ್.ಜಿ. ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿಷಯುಕ್ತ ಅನಿಲ ಸೋರಿಕೆಯಾಗಿ 12 ಮಂದಿ ಮೃತಪಟ್ಟು, ಸುಮಾರು 500 ಜನರು ಅಸ್ವಸ್ಥರಾದ ದುರ್ಘಟನೆಯನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments