ಹೊಸಗುಡ್ಡದಹಳ್ಳಿ ದುರಂತದದಲ್ಲಿ ಬೆಂಕಿಗಾಹುತಿಯಾಯ್ತು ಬದುಕು..!

ಈ ಸುದ್ದಿಯನ್ನು ಶೇರ್ ಮಾಡಿ

# ಶಿವಣ್ಣ
ಬೆಂಗಳೂರು, ನ.13- ಸುಟ್ಟು ಹೋದ ಕಟ್ಟಡ, ಬೆಂದು ಹೋದ ಮರ, ಸುಟ್ಟು ಕರಕಲಾಗಿರುವ ವಸ್ತುಗಳು, ಬೆಂಕಿಗೆ ಆಹುತಿಯಾಗಿರುವ ಬ್ಯಾರೆಲ್‍ಗಳು… ಇವು ಕಂಡುಬಂದಿದ್ದು ನಗರದ ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯಲ್ಲಿ. ನವೆಂಬರ್ 10ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿದ್ದ ಗೋದಾಮಿ ನಲ್ಲಿ ಬೆಂಕಿ ಕಾಣಿಸಿಕೊಂಡು ಗೋದಾಮಿನಲ್ಲಿದ್ದ ರಾಸಾಯನಿಕ ವಸ್ತುಗಳೆಲ್ಲ ಆಹುತಿಯಾಗಿರುವುದಲ್ಲದೆ ಇಡೀ ಕಟ್ಟಡವನ್ನೇ ಆಪೋಷನ ತೆಗೆದು ಕೊಂಡಿದೆ.

ಕಟ್ಟಡದ ಮುಂದಿದ್ದ ಎರಡು ವಿದ್ಯುತ್ ಕಂಬದ ಕೇಬಲ್‍ಗಳು, ಕಾರು, ಸರಕು-ಸಾಗಣೆ ವಾಹನ, ಸ್ಕೂಟರ್‍ಗಳು ಸುಟ್ಟು ಹೋಗಿದ್ದು, ಅವಶೇಷಗಳು ಮಾತ್ರ ಕಾಣಸಿಗುತ್ತವೆ. ಅಲ್ಲದೆ, ರಸ್ತೆಯಲ್ಲಿದ್ದ ಮರವೂ ಕೂಡ ಸುಟ್ಟು ಹೋಗಿದೆ. ಅಕ್ಕಪಕ್ಕದಲ್ಲಿದ್ದ ಕಟ್ಟಡಗಳಿಗೂ ಬೆಂಕಿಯ ಕೆನ್ನಾಲಿಗೆ ಚಾಚಿದ್ದು, ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್‍ಗಳು ಬೆಂಕಿಗೆ ಆಹುತಿಯಾಗಿ ಮೆಲ್ಟ್ ಆಗಿರುವ ದೃಶ್ಯ ಕಂಡುಬಂತು.

ಅಗ್ನಿ ಅನಾಹುತದಿಂದಾಗಿ ಮನೆಯಲ್ಲಿದ್ದ ಎಲ್ಲ ವಸ್ತುಗಳೂ ಸುಟ್ಟು ಹೋಗಿದ್ದು, ತೊಟ್ಟ ಬಟ್ಟೆಯಲ್ಲೇ ಇದ್ದೇನೆ ಎಂದು ಸ್ಥಳೀಯ ನಿವಾಸಿ ಹರೀಶ್ ಕುಮಾರ್ ರಾಜಾರಾಮ್ ಕಣ್ಣೀರು ಹಾಕಿದರು. ತಾವು ಬಿಎಸ್‍ಸಿ ಪದವೀಧರ ರಾಗಿದ್ದು, ಕೆಲಸದ ನಿಮಿತ್ತ ಮನೆಯ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.

ಗೃಹೋಪಯೋಗಿ ವಸ್ತುಗಳೆಲ್ಲವೂ ಹಾನಿಯಾಗಿವೆ. ಶೈಕ್ಷಣಿಕ ಪ್ರಮಾಣ ಪತ್ರಗಳು, ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಿದ ಸೇವಾ ಪ್ರಮಾಣ ಪತ್ರಗಳು ಕೂಡ ಬೆಂಕಿಗೆ ಆಹುತಿಯಾಗಿದ್ದು, ಮುಂದೆ ಉದ್ಯೋಗ ಹುಡುಕಿಕೊಳ್ಳುವುದೇ ಕಷ್ಟವಾಗಿದೆ ಎಂದು ಹೇಳಿದರು.

ಸ್ಥಳಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಭೇಟಿ ನೀಡಿ ಪರಿಹಾರದ ಭರವಸೆ ನೀಡಿ ಹೋಗಿದ್ದಾರೆ. ಆಗಿರುವ ಅನಾಹುತಕ್ಕೆ ಬಿಬಿಎಂಪಿ ವತಿಯಿಂದಲೂ ಪರಿಹಾರಕ್ಕಾಗಿ ಮನವಿ ಮಾಡಲಾಗಿದೆ ಎಂದರು. ಅಗ್ನಿ ಅನಾಹುತ ಸಂಭವಿಸಿದ ಹೊಸಗುಡ್ಡದಹಳ್ಳಿಯ ಮೊದಲನೆ ಮುಖ್ಯರಸ್ತೆ, ಎ ಕ್ರಾಸ್‍ನಲ್ಲಿ ಸಣ್ಣಪುಟ್ಟ ಕೈಗಾರಿಕೆಗಳೇ ಕಂಡುಬರುತ್ತವೆ.

ತಳಮಹಡಿ ಯಲ್ಲಿ ಪೀಠೋಪಕರಣ, ಗಾರ್ಮೆಂಟ್ಸ್, ಬಟ್ಟೆ ಇಸ್ತ್ರಿ ಮಾಡುವ, ಸ್ಕ್ರೂ ತಯಾರಿಸುವಂತಹ ಸಣ್ಣ ಸಣ್ಣ ಕೈಗಾರಿಕೆಗಳು ಇವೆ. ಕೆಲವೊಂದು ಕಟ್ಟಡಗಳ ಮೇಲ್ಭಾಗದಲ್ಲಿ ಜನರು ಕೂಡ ವಾಸಿಸುತ್ತಿದ್ದಾರೆ. ಬೆಂಕಿ ಸಂಭವಿಸಿದ ಗೋದಾಮಿನ ಹಿಂಭಾಗದ ಕಟ್ಟಡಗಳಿಗೂ ಬೆಂಕಿಯ ಕೆನ್ನಾಲಿಗೆ ತಗುಲಿ ಕಿಟಕಿ, ಬಾಗಿಲು, ಮನೆಯ ವಸ್ತುಗಳು ಕೂಡ ಹಾಳಾಗಿರುವ ದೃಶ್ಯ ಕಂಡುಬಂದಿತು.

ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತು. ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸೌಮ್ಯ ಎಂಬುವವರು ತಿಳಿಸಿದರು. ಜ್ಞಾನಮೂರ್ತಿ ಎಂಬುವವರು ಮಾತನಾಡಿ, ನವೆಂಬರ್ 10ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಸ್ಫೋಟದ ಅನುಭವವಾಯಿತು. ಪಕ್ಕದಲ್ಲೇ ಇರುವ ರಾಜಕಾಲುವೆಯಲ್ಲಿ ಜೆಸಿಬಿ ಕೆಲಸ ಮಾಡುತ್ತಿತ್ತು. ಜೆಸಿಬಿ ಶಬ್ದವಿರಬಹುದು ಎಂದು ಭಾವಿಸಿದೆವು. ತಕ್ಷಣವೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿತು. ಗಾಬರಿಯಿಂದ ಹೊರಗೆ ಓಡಿ ಬಂದೆವು ಎಂದರು.

ತಕ್ಷಣವೇಪೊಲೀಸರು ಸ್ಥಳಕ್ಕಾಗಮಿಸಿ ಎಲ್ಲರನ್ನೂ ಪ್ರದೇಶದಿಂದ ಹೊರಗೆ ಕಳುಹಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ ಇಡೀ ದಿನ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದರು ಎಂದು ಹೇಳಿದರು.

ಮನೆ ಮೇಲಿರುವ ನೀರಿನ ಟ್ಯಾಂಕ್‍ಗಳೆಲ್ಲ ಬೆಂಕಿಗೆ ಆಹುತಿಯಾಗಿವೆ. ಘಟನೆ ನಡೆದ ಸಂದರ್ಭದಲ್ಲಿ ತಾವು ಹೊರಹೋಗಿದ್ದು, ತಮ್ಮ ಪತಿ, ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದಿದ್ದರು ಎಂದು ಪಂಕಜಾ ಹೇಳಿದರು.

Facebook Comments