ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲು ಧೋನಿ ಮಾಸ್ಟರ್ ಪ್ಲ್ಯಾನ್
ಮುಂಬೈ, ಮೇ 12- ಕಳೆದ ಪಂದ್ಯದಲ್ಲಿ ರಿಷಭ್ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೂಲಕ 91 ರನ್ಗಳಿಂದ ಅಭೂತಪೂರ್ವ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲು ನಾಯಕ ಧೋನಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ.
ಐಪಿಎಲ್ನ 5 ಬಾರಿ ಚಾಂಪಿಯನ್ ಆಗಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇಆಫ್ ಸುತ್ತಿನಿಂದ ಹೊರಗುಳಿದಿದ್ದು, ಸಿಎಸ್ಕೆ ಆ ಹಂತವನ್ನು ತಲುಪಲು ಇಂದಿನ ಪಂದ್ಯದ ಗೆಲುವು ಮಹತ್ತರವಾಗಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸೋಲು ಕಂಡರೆ ಐಪಿಎಲ್ ಚಾಂಪಿಯನ್ಗಳಾದ ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಪ್ಲೇಆಫ್ ಆಸೆ ತೊರೆದ ಮೊದಲೆರಡು ತಂಡವೆನಿಸಿಕೊಳ್ಳುತ್ತದೆ, ಐಪಿಎಲ್ ಕಪ್ ಗೆದ್ದಿರುವುದರಲ್ಲೂ ಈ ಎರಡು ತಂಡಗಳೇ ದಾಖಲೆ ಬರೆದಿದೆ.
ಸ್ಟಾರ್ ಆಟಗಾರರು ಔಟ್:
ಸಿಎಸ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿರುವ ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ರವೀಂದ್ರಾಜಾಡೇಜಾರ ಅನುಪಸ್ಥಿತಿ ಕಾಡಿದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ಗೆ ಸೂರ್ಯಕುಮಾರ್ ಯಾದವ್ರ ಅಲಭ್ಯತೆಯ ಕೊರತೆ ಕಾಡಲಿದೆ.
ಆರಂಭಿಕರ ಪೈಪೋಟಿ: ಸಿಎಸ್ಕೆ ತಂಡಕ್ಕೆ ನ್ಯೂಜಿಲ್ಯಾಂಡ್ನ ಆಟಗಾರ ಡೇವಿಡ್ ಕಾನ್ವೆ ಅವರು ಬಂದ ನಂತರ ಆ ತಂಡದ ಆರಂಭಿಕ ಬಲ ಹೆಚ್ಚಾಗಿರುವುದಲ್ಲದೆ, ಋತು ರಾಜ್ ಗಾಯಕ್ವಾಡ್ ಕೂಡ ತಮ್ಮ ಲಯವನ್ನು ಕಂಡುಕೊಂಡಿದ್ದಾರೆ, ಈ ಇಬ್ಬರು ಆಟಗಾರರು ಎದುರಾಳಿ ತಂಡಗಳ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ಚೆಂಡನ್ನು ಬೌಂಡರಿ ಗೆರೆ ಆಚೆ ಮುಟ್ಟಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸುವ ಮೂಲಕ ಬೃಹತ್ ಮೊತ್ತ ಗಳಿಸಲು ಕಾರಣರಾಗಿದ್ದಾರೆ, ಆದರೆ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಮುಂಬೈ ಇಂಡಿಯನ್ಸ್ದ್ದು, ಆ ತಂಡದ ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಬೃಹತ್ ಜೊತೆಯಾಟ ನೀಡುವಲ್ಲಿ ಎಡವುತ್ತಿರುವುದರಿಂದ ಆ ತಂಡ ಸೋಲಿನ ರುಚಿ ಕಾಣುವಂತಾಗಿದೆ.
ಬೌಲಿಂಗ್ ಪ್ರಬಲ: ಮುಂಬೈಗೆ ಹೋಲಿಸಿದರೆ ಸಿಎಸ್ಕೆ ಬೌಲಿಂಗ್ ಬಲ ಕೂಡ ಪ್ರಬಲವಾಗಿದೆ, ಮುಖೇಶ್ ಚೌಧರಿ, ಮಹೇಶ್ ತೀಕ್ಷಣ, ಸಿಮ್ರನ್ಜಿತ್ ಸಿಂಗ್ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ, ಆದರೆ ಮುಂಬೈನಲ್ಲಿ ಬೂಮ್ರಾ ಕೆಕೆಆರ್ ಪಂದ್ಯದಲ್ಲಿ 5 ವಿಕೆಟ್ ಕಿತ್ತರೂ ಉಳಿದ ಬೌಲರ್ಗಳಿಂದ ಸಮರ್ಥ ಪ್ರದರ್ಶನ ಕಂಡು ಬರದಿದ್ದರಿಂದ 58 ರನ್ಗಳಿಂದ ಸೋತಿದ್ದು, ಇಂದಿನ ಪಂದ್ಯವನ್ನು ಕೆಲವು ತಂಡದಲ್ಲಿ ಹಲವು ಬದಲಾವಣೆ ಮಾಡಿಕೊಳ್ಳುವತ್ತಲೂ ಮುಂಬೈ ಚಿಂತಿಸಿದೆ. ಆದರೆ ಸಿಎಸ್ಕೆಯ ನಾಯಕ ತನ್ನಲ್ಲಿರುವ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಿ ಪಂದ್ಯ ಗೆಲ್ಲಲು ಟೊಂಕ ಕಟ್ಟಿ ನಿಂತಿದ್ದಾರೆ.